Friday, August 21, 2009

ವಿಶಾಖಪಟ್ನಂ ಜ್ಙಾಪಕಗಳು

ವಿಶಾಖಪಟ್ನಮ್ ಯಾವಾಗ ಹುಟ್ಟಿತೋ ನಾನರಿಯೆನಾದರೂ ವಿಶಾಖಪಟ್ನದಲ್ಲಿ 1910ನೇ ಸಂವತ್ಸರದಲ್ಲಿ ನಾನು ಜನ್ಮತಾಳಿದೆ. ಅಂದಿನಿಂದ ನಾನೂ ವಿಶಾಖಪಟ್ನವೂ ಜೊತೆಯಾಗೆ ಬೆಳೆಯುತ್ತ ಬಂದಿದ್ದೇವೆ. ಮೊನ್ನೆ 'ಜಲ ಉಷ'() (ಎಂತ ವಿಕಾರವಾದ ಹೆಸರು!) ಸಮುದ್ರ ಪ್ರವೇಶ ಮಾಡಿದಾಗ ನಾನು ವಿಶಾಖಪಟ್ನದಲ್ಲಿ ಇರಲಿಲ್ಲವಾದರು ಆದಿನ ನಾನು ಕೂಡ ಆಧ್ಯಾತ್ಮಿಕವಾಗಿ ಒಂದು ಸಮುದ್ರ ಆರಂಭ ಮಾಡಿದೆ.

ಇದು ನಿಜ! ನನ್ನ ಕವಿತ್ವಕ್ಕೆ ಸಮುದ್ರವೇ ಆವೇಶ. ಸಮೀಪದಲ್ಲಿ ಸಮುದ್ರವಿಲ್ಲದ ಸ್ಥಳ ನನ್ನನ್ನು ಕೊಲ್ಲುತ್ತದೆ. ಡೆಲ್ಲಿಯಲ್ಲು, ಲಕ್ನೋನಲ್ಲು ಎಷ್ಟೋ ತಿಂಗಳುಗಳು ನಾನು ಜೀವಿಸಿದೆ. ಆದರೆ ಒಂದು ಗೀತೆಯೂ ಊದಲಾರದೆ ಹೋದೆ. ದಿನವೂ ಹೋಗದಿದ್ದರೂ ಹತ್ತಿರದಲ್ಲೆಲ್ಲೋ ಮಹಾಸಮುದ್ರವಿದೆಯೆಂದರೆ ಸಾಕು, ಖರ್ಚು ಮಾಡದಿದ್ದರೂ ಬ್ಯಾಂಕಿನಲ್ಲಿ ಹತ್ತು ಸಾವಿರ ಠೇವಣಿಯಿಟ್ಟಷ್ಟು ಧೈರ್ಯ!

ಮಿತ್ರ ಪಾಲೂರಿ ಸೀತಾಪತಿರಾವು() ಹೆಂಡತಿಗೆ ವಿಷವಿಟ್ಟು ಸಾಯಿಸಿದ್ದಕ್ಕೆ ಸೆಂಟ್ರಲ್ ಜೈಲಿನಲ್ಲಿ ಉರಿಗೆ ಹಾಕಿದರು. ಕೊನೆಯದಾಗಿ ಒಂದು ಸೀಜರ್ ಸಿಗರೇಟು ಕೇಳಿ ತರಿಸಿಕೊಂಡು ಸೇದಿ 'ಇನ್ನು ನಿಮ್ಮ ಕೆಲಸ ಮಾಡಿಕೊಳ್ಳಿ'ರೆಂದನಂತೆ ಆತ. ಎಷ್ಟೋ ನೂರು ಗ್ರಂಥಗಳನ್ನು ಓದಿದರೂ ಆಗದ ಅನುಭವವನ್ನ ಈ ಸಂನಿವೀಸ ಕೇಳಿದ ಕ್ಷಣದಲ್ಲಿ ಸಂಪಾದಿಸಿದೆ.

ನನ್ನ ವಿಶಾಖ ಸಂಸ್ಕೃತಿಯ ಪ್ರಧಾನರಸ ಬೀಭತ್ಸವೇ ಅನ್ನುವುದನ್ನು ಒಪ್ಪುತ್ತೇನೆ. ಆದರೆ ಅಭೌಮವಾದ ಮಹದಾನಂದ ಅನುಭವಿಸಿದ ಕ್ಷಣಗಳು ಕೂಡಾ ಅನೇಕ ಇವೆ. ರಾಳ್ಳತೋಟದಲ್ಲಿ ಕೆಲವು ಚಳಿಗಾಲದ ಪ್ರಾತಃಕಾಲಗಳು ಕುಸುಮಿಸುತ್ತಿರುವ ಗುಲಾಬಿ ಸಸಿಗಳ ನಡುವೆ ಕಳೆದುಹೋದವು. ಯಾರಾಡಕೊಂಡದ ಮೇಲೆ ಒಂಟಿಯಾಗಿ ನಿಂತು ಒಂದೊಂದು ದಿನ ಒಂದೊಂದು ಥರ ವಿಶಾಖಪಟ್ನವನ್ನು ನೋಡಿದೆ.

ಯಾವತ್ತಿಗಾದರೂ ನಾನೊಂದು ಹದಿನೈದು ಅಶ್ವಾಸಗಳ ಮಹಾಕಾವ್ಯವನ್ನು ಬರೆಯುತ್ತೇನೆ.

ಅದರ ಹೆಸರು 'ವಿಶಾಖಪಟ್ನಮ್'.

ನವೋದಯ ಪತ್ರಿಕೆ : 2-5-1948

ಟಿಪ್ಪಣಿ:
(೧) ವಿಶಾಖಪಟ್ನದಲ್ಲಿ ಭಾರತ ನೌಕಾನಿರ್ಮಾಣ ಕೇಂದ್ರ ನಿರ್ಮಿಸಿದ ಮೊದಲ ಹಡಗು ಜಲ ಉಷ 14-3-1948ರಂದು ಜಲಪ್ರವೇಶ ಮಾಡಿತು.
(೨) ಪಾಲೂರಿ ಸೀತಾಪತಿರಾವು ತಹಸೀಲ್ದಾರರ ಮಗ. ಮೆಡಿಕಲ್ ವಿದ್ಯಾರ್ಥಿ ಎಲ್.ಎಂ.ಪಿ. ಮೂರನೇ ವರ್ಷ ಓದುತ್ತಿದ್ದ. ಅನ್ನದಲ್ಲಿ ಪೊಟಾಸಿಯಂ ಸಯನೈಡ್ ಕಲೆಸಿ ಹೆಂಡತಿಯನ್ನು ಕೊಂದುಬಿಟ್ಟ.1928ರಲ್ಲಿ ಉರಿಶಿಕ್ಷೆ ವಿಧಿಸಿ, 1931ರಲ್ಲಿ ಉರಿಗೆ ಹಾಕಿದರು.

(ಶ್ರೀ ಶ್ರೀ ಯವರ ಆತ್ಮಚರಿತ್ರಾತ್ಮಕ ಕಾದಂಬರಿ 'ಅನಂತಂ'ನಿಂದ.)
ಹೊರಳಿ ಹೋದ ಕ್ಷಣಗಳು
-ಶ್ರೀ ಶ್ರೀ

ಓ ಚೆದುರಿದ ಅಕ್ಷರಗಳೇ! ಕರಗಿಹೋದ ಕ್ಷಣಗಳೇ! ಪ್ರವಹಿಸಿರಿ ನನ್ನ ಲೇಖನಿಯಲ್ಲಿ ಶಾಯಿಯಂತೆ!

ಸರಿ ಸತ್ತುಹೋದೆ, ನನಗೆ 1990 ರಲ್ಲಿ ಸಾಯಬೇಕೆಂದಿದೆ. ಬಹುಶಃ ವಿಮಾನ ಪ್ರಮಾದದಲ್ಲಿ, ಇಲ್ಲ ಜಲಗಂಡದಲ್ಲಾ? ಅದೋ ಇದೋ ಅಲ್ಲದಿದ್ದರೆ ನೆಲದ ಮೇಲೇ ಕಾಲಧರ್ಮ.

ನನ್ನ ಶವದ ಸುತ್ತಲೂ ಬಹಳ ಜನ ಸೇರಿ ಅಳುತ್ತಿದ್ದಾರೆ. 'ಯಾಕಳುತ್ತೀರಿ, ಈಗೇನಾಗಿಹೋಯ್ತು?' ಎಂದು ನಾನೆಷ್ಟು ಧಾರಾಪಾತವಾಗಿ ಅರಚುತ್ತಿದ್ದರೂ ಯಾರಿಗೂ ನನ್ನ ಮಾತುಗಳು ಕೇಳಿಸವು.'ಅನಂತರದ ಕಾರ್ಯಕ್ರಮದ ಕುರಿತು ಆಲೋಚಿಸಿ'ರೆಂದರ್ಯಾರೋ! ದಹನ ಸಂಸ್ಕಾರ ಅಜೆಂಡಾದೊಳಗೆ ಬಂತು. ಅದೇ ಸಾಧ್ಯವಿಲ್ಲಾಂತೀನಿ. ಮತಕ್ಕೆ ಸಂಬಂಧಿಸಿದ ಯಾವ ವಿಧವಾದ ಕರ್ಮಕಾಂಡಕ್ಕೆ ನನ್ನ (ಸಜೀವ ಯಾ ನಿರ್ಜೀವ) ದೇಹವನ್ನು ಅಂಕಿತ ಮಾಡುವುದನ್ನು ನಾನು ಸುತರಾಂ ಅಂಗೀಕರಿಸೆನು. ಆಫ಼್ಟರ್ ಆಲ್ ಇಟ್ ಈಸ್ ಮೈ ಕಾರ್ಪ್ಸ್, ಇಸ್ನ್ಟ್ ಇಟ್? ಆರ್ ಇಸ್ ಇಟ್?

ಸುತ್ತಲೂ ಸೇರಿದವರಲ್ಲಿ ಕೆಲವರಿಗೆ ನಾನೊಮ್ಮೆ ಬರೆದ ಮರಣಶಾಸನ ನೆನಪಿಗೆ ಬಂದಿತು. ಅದರಲ್ಲಿ ನಾನು 'ನಾನು ಸತ್ತುಹೋದ ನಂತರ ನಡೆಯಬೇಕಾದ ಮೊದಲ ಕೆಲಸ ನನ್ನ ದೇಹವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕೊಡುವುದು' ಎಂದು ಬರೆದಿದ್ದೆ. ಆ ನಂತರ ನಡೆಯಬೇಕಾದ್ದು ಅಲ್ಲಿರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಲ್ಲಿ ನಿರೀಶ್ವರವಾದಿಗಳ ಅಧ್ವರ್ಯದಲ್ಲಿ ನಡೆಯಲೆಂದು ನನ್ನ ಆಕಾಂಕ್ಷೆ.

ಅತ್ತು, ಅತ್ತು ನಿಲ್ಲಿಸಿದವರು ನಿಲ್ಲಿಸಿದರೂ, ಅಳುತ್ತಿರುವವರು ಇನ್ನೂ ಅಳುತ್ತಿದ್ದಾರೆ. ಅಳಲಿಬಿಡಿ ನನಗೇನೂ ಅಭ್ಯಂತರವಿಲ್ಲ.

ಪತ್ರಿಕೆಯವರಿಗೆ ಬೇಕಾದಷ್ಟು ಸುದ್ದಿ. ಏನೇನೋ ಬರೆಯುತ್ತಿದ್ದಾರೆ. ಬರೆದುಕೊಳ್ಳಲಿಬಿಡಿ ನನ್ನ ಅಭ್ಯಂತರವಿಲ್ಲ.

ವಿರಸಂ ನವರು ನನ್ನ ಮೆರವಣಿಗೆಯಾಗಬೇಕೆಂದರು. ನನ್ನ ಅಭ್ಯಂತರವಿಲ್ಲ. ನನ್ನ ಶವದ ಮೇಲೆ ಕೆಂಪು ಬಾವುಟ ಹೊದಿಸುವುದನ್ನು ಮರೆಯದಿರಿ ಎಂದು ಪದೇಪದೇ ಅಲವತ್ತುಕೊಂಡೆ.

ನನ್ನ ಮಗನೇ ಬಂದು ಅವನ ಕೈಯಾರೆ ನನ್ನ ಚಿತೆಗೆ ಅಗ್ನಿಸ್ಪರ್ಷ ಮಾಡುವೆನೆಂದನು. ಇದು ಅವನಿಗೇ ಬಂದ ಆಲೋಚನೆಯಾಗಿರದು. ಯಾರೋ ಹೇಳಿಕೊಟ್ಟ ಟ್ಯೂಷನ್ - ಅದೇ ಸಾಧ್ಯವಿಲ್ಲವೆನ್ನುತ್ತೇನೆ.

(ಶ್ರೀ ಶ್ರೀ ಯವರ ಆತ್ಮಚರಿತ್ರಾತ್ಮಕ ಕಾದಂಬರಿ 'ಅನಂತಂ'ನಿಂದ.)
ಮತ್ತೊಂದು ಪ್ರಾರಂಭ
1910-1925
ಅನಂತವೆನ್ನುವುದು ಅನಾದಿ ಕೂಡಾ! ಹೀಗಾಗಿಯೇ ಎಲ್ಲಿಂದ ಪ್ರಾರಂಭಿಸಬೇಕೋ ಹೇಗೆ ಪ್ರಾರಂಭಿಸಬೇಕೋ ತಿಳಿಯದಾಗಿದೆ.

ಸುಳ್ಳು! ಆರಂಭದಲ್ಲೇ ಸುಳ್ಳು! ೧೯೧೦ರಿಂದ ಪ್ರಾರಂಭಿಸಬೇಕೆಂದು ಮೊದಲೇ ಅಂದುಕೊಳ್ಳಲಿಲ್ಲವೇ?

ಇಲ್ಲ. ಇದು ಪ್ರಾರಂಭವಲ್ಲ. ನಿಜಕ್ಕೂ ತಿಳಿಯದಾಗಿದೆ ಈ ಅನಂತವನ್ನು ಎಲ್ಲಿಂದ ಹೇಗೆ ಪ್ರಾರಂಭಿಸುವುದೋ!
ಕೃತ್ಯಾದವಸ್ಥೆ, ಆರಂಭವೇ ದೊಡ್ಡ ಅವಸ್ಥೆ. ನನ್ನ ಜೀವನದ ಕುರಿತಾದ ನಿಜ ಹೇಳಬೇಕೆನ್ನುವ ತಹತಹ! ಹೇಳಲಾರೆನೇನೋ ಅನ್ನುವ ಅನುಮಾನ. ಹೇಳಬಲ್ಲೆನೆಂಬ ಧೈರ್ಯ.

ಒಂದೊಮ್ಮೆ ಆರಂಭಿಸಿದೆ. ನಿಲ್ಲಿಸಿಬಿಟ್ಟೆ. ಮತ್ತೆ ಆರಂಭಿಸಿದೆ. ಮತ್ತೆ ಬಿಟ್ಟುಬಿಟ್ಟೆ.

ಇದು ಮತ್ತೊಂದು ಪ್ರಾರಂಭ!

ಇದುವರೆಗೆ ಪ್ರಾರಂಭಿಸಿದಾಗ 'ಎಷ್ಟು ದ್ವ್ಯರ್ಥ ಸೃಷ್ಟಿ!' ಎಂದೆ ಇವಾಗಲೂ ಅದೆ ಹೇಳುತ್ತೇನೆ. ಈ ಸೃಷ್ಟಿ ವ್ಯರ್ಥವಲ್ಲ. ದ್ವ್ಯರ್ಥ. ಇದಕ್ಕೆ ಎರಡರ್ಥಗಳಿವೆ.

ಆ ಮಾತಿಗೆ ಬಂದರೆ ಅನೇಕ ಅರ್ಥಗಳಿವೆ. ಅದೇ ಅನಂತ. ಇದೇ ನನ್ನ ಜೀವಿತ. ಸೃಷ್ಟಿಯಲ್ಲಿನ ಯಾಗಪದ್ಯವನ್ನು ನನ್ನ ಜೀವನದಲ್ಲಿ ಸಮನ್ವಯಿಸಿಕೊಳ್ಳುವುದಕ್ಕೆ ಈ ಪ್ರಯತ್ನ.

ಏಕಕಾಲಕ್ಕೆ ನನ್ನ ಜೀವನ ಸತ್ಯವೂ, ಅಸತ್ಯವೂ ಕೂಡ. ಅದು ಹೇಗಾಗುತ್ತೆ?

ಸೋಮದತ್ತ ಯಜ್ನದತ್ತ ಆಗಲೂಬಹುದು; ಆಗದಿರಲೂಬಹುದು. ಒಂದು ಸಲ ನಿಲ್ಲಿಸುವುದು, ಇಲ್ಲದಿರುವುದು ಹೇಗೆ? ಯಾವುದೋ ಒಂದು ಮಾತ್ರವೇ ನಿಜ. ಎರಡೂ ಆಗಿಬಿಡುವುದು ಅಸತ್ಯವೆನ್ನುವ ವಾದವನ್ನು ತಿರಸ್ಕರಿಸುತ್ತ ಎರಡೂ ಆಗಿರಬಹುದೆನ್ನುತ್ತಾನೆ ನಮ್ಮ ಒಬ್ಬ ಪ್ರಾಚೀನ ತಾರ್ಕಿಕರಲ್ಲಿ ಪ್ರಮುಖನೊಬ್ಬ.
(ಶ್ರೀ ಶ್ರೀ ಯವರ ಆತ್ಮಚರಿತ್ರಾತ್ಮಕ ಕಾದಂಬರಿ 'ಅನಂತಂ'ನಿಂದ.)

Tuesday, August 11, 2009

ಗೊತ್ತು ಗುರಿಯಿರದ ದಾರಿಯಲ್ಲಿ...

'ಎಲ್ಲರು ಯಾಕೆ ಬರೆಯುತ್ತಾರೆ?' ಅನ್ನುವ ಪ್ರಶ್ನೆಗೆ ಅವರವರದೆ ಉತ್ತರ ಇದ್ದಿರಬೇಕು/ಬಹುದು. ನನಗು ಕೂಡ ಯಾಕೆ ಬರೆಯಬೇಕು ಅನ್ನುವ ಪ್ರಶ್ನೆ ಕಾಡಿಲ್ಲವಾದ್ದರಿಂದ - ಉತ್ತರ ಹುಡುಕುವ ಗೋಜಿನಿಂದ 'ಮುಕ್ತ ಮುಕ್ತ'. ಬರವಣಿಗೆಯಿಂದ ನೆಮ್ಮದಿ ಸಿಗುತ್ತ? ಅಥವ ಇನ್ನೊಬ್ಬರು ಓದಿ 'ಹುಳ' ಬಿಟ್ಟುಕೊಂದರೆ ಸಿಗುವ ಅನಿರ್ವಚನೀಯವಾದ ಸ್ಯಾಡಿಸ್ಟ್ ಫೀಲಿಂಗ್? ಅಂತು ಬರೆಯೋದು ರೂಡಿಸಿಕೊಂಡ ಮೇಲೆ ಬರೆಯದಿರೋದು ಕಷ್ಟವೆನ್ನುವುದು ಮಾತ್ರ ಸತ್ಯ. ಅದಕ್ಕೆ ಸಾಕ್ಷಿಯಾಗಿ ಸಾವಿರಾರು ಕವಿಗಳು, ಕುಕವಿಗಳು, ನನ್ನಂತಹ ಪಾರ್ಟ್ ಟೈಮ್ ಲೇಖಕರು ಅಸಂಖ್ಯ ಇರಬಹುದು.

ಶಾಲಾ ದಿನಗಳಲ್ಲಿ ಕೆಲ ಪ್ರಬಂದಗಳನ್ನು ಬರೆದದ್ದು ಬಿಟ್ಟರೆ ನಾನು ಪ್ರಯತ್ನಪೂರ್ವಕ ಬರವಣಿಗೆಯಲ್ಲಿ ತೊಡಗಿಕೊಂಡದ್ದು ಕಡಿಮೆಯೆ. ಕಾಲೇಜು ದಿನಗಳಲ್ಲಿ ಬರೆದ ಕೆಲವು ಬಿಡಿ ಲೇಖನಗಳನ್ನು ನನ್ನ ಕೆಲ ಪ್ರಾಧ್ಯಾಪಕರು ಗಮನಿಸಿ 'ಬರೆಯಬಲ್ಲೆ'ನೆಂಬ ನಂಬಿಕೆ ಮೂಡಿಸಿದ್ದರೊಂದಿಗೆ ಸುರುವಾಯಿತು ಹಂಬಲ. ಈ ನಡುವೆ ಪತ್ರಿಕೋದ್ಯಮದ ಹುಚ್ಚು ಕೈ ಹಿಡಿದು ನಡೆಸಿತು. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಲೇಖನಗಳು, ಅದಕ್ಕೆ ಬಂದ ಪ್ರತಿಕ್ರಿಯೆಗಳು 'ನಾನೂ ಗಂಭೀರವಾಗಿ ಬರೆಯಬಲ್ಲೆನೆಂಬ ಭರವಸೆಯನ್ನು ಮೂಡಿಸುವುದರೊಂದಿಗೆ - ಜೀವನ, ಬರವಣಿಗೆ ಬೇರೆ ಬೇರೆ ಅಲ್ಲವೇನೋ ಅನ್ನುವಷ್ಟು ಆತುಕೊಂಡವು. ದೊಡ್ಡವರ ಒಡನಾಟ, ಪಾತ್ರಿಕೇಯನೆಂಬ ಸಾಮಾಜಿಕ ಹೆಗ್ಗಳಿಕೆ ಎಲ್ಲವು ಒಂದಷ್ಟು ಮುದ ತಂದಿದ್ದು ಹೌದು. ಕ್ರಮೇಣ ಬರೆದು ಬದುಕಲು ಬಿಡದ ವಾಸ್ತವ ನನ್ನನ್ನು ಬೇರೊಂದೆಡೆಗೆ ಎಳೆಯ ಹತ್ತಿತ್ತು. ಅದಷ್ಟೆ ಅಲ್ಲದೆ - ಒಂದು ಹಂತದಲ್ಲಿ - ನಾನು ಬರೆಯುತ್ತಿರೊದೆಲ್ಲ ಸರಿ ಇಲ್ಲ - ಬರೆಯೊಕ್ಕೆ ಬೇಕಾಗಿರೊ ಅನುಭವ ನನಗಿಲ್ಲ, ನಾನು ಬರಿತ ಇರೊದೆಲ್ಲ 'ತೀರಾ ಕಚ್ಚ' ಅನ್ನಿಸಿದಾಗ, ೩೫ ಅಗೊವರೆಗೆ ಬರೆಯೋದು ಬೇಡ ಅನ್ತ ನಿರ್ಧರಿಸಿ ಬರೆಯೊದನ್ನ ನಿಲ್ಲಿಸಿಬಿಟ್ಟೆ. ಒಂದು ದಶಕದ ಮುನಿಸು ಮುಗಿಸುವ ಮನಸು ಈಗ ಬಂದಿದೆ. ಬರವಣಿಗೆಯ ಸಖ್ಯಕ್ಕೆ ನಾನು ಕಾದಿದ್ದೇನೆ. ಬರೆಸುವ ಕೈಗಳು ಅನುಮತಿಸಿದರೆ ಬರೆಯುವ ಕೈಗಳದ್ದೇನು ಮಹಾ ಅಲ್ಲವ?

ಗೊತ್ತು ಗುರಿಯಿರದ ದಾರಿಯಲ್ಲಿ ಇನ್ನೊಂದು ಪ್ರಯಣಕ್ಕೆ ನಾನೆನೋ ರೆಡಿ.. ಬರೆಯೊ ಹದ ಇದೆಯ? ಬರೆಯಬಲ್ಲೆನ? ಅನ್ನೊ ಅನುಮಾನ ಇನ್ನು ಒಂದೆರಡು ದಿನ ಕಾಡೀತು... ನೋಡೋಣ... ಉತ್ತರಕ್ಕೆ ಬಹಳ ಕಾಯಬೇಕಾಗಿಲ್ಲ ಅನ್ನಿಸುತ್ತೆ.