Monday, April 7, 2014

:ಸ್ವಗತ ೨:


ಒಂದು ಹನಿ ಕಣ್ಣಾಲಿಯಂಚಿನಲಿ ಕಾಯುತಿದೆ ಉರುಳಬಹುದೇ?
ಸಖಿ ಉರುಳಬಹುದೇ?
ನಿನ್ನ ಅಪ್ಪಣೆಯರಿತು ಮಿಡಿದಿದ್ದ ಹೃದಯವಿದು ತಡೆಯಲಾರದೆ ಇಂದು ಕೇಳುತಿಹುದು
ಅಪ್ಪಣೆಯೇ ಹೇಳು ಹನಿ ಉರುಳಬಹುದೇ?
ಪರವಶದ ನಿಮಿಷಗಳ ದಾಟಿ ಮಾತು ಮೌನದ  ಕದವ ತಟ್ಟುತಿಹುದು
ಕಟ್ಟಿದ್ದ ಪದ್ಯಗಳು ಬಿಗುಮಾನಕೆರವಾಗಿ ಎದೆಯ ಒಳಗಿನ ದನಿಯ ತಾಕುತಿಹುದು
ಹೊರಳು ಹೊರಳಿಗೂ ಕನಲಿ ನರಳುತಿಹುದು...
ನೋವಾಗಿ ನೆನಪಾಗಿ ಒಲುಮೆಯೇ ಒಡಪಾಗಿ
ಪ್ರಶ್ನ ಚಿನ್ಹೆಯ ಹಾಗೆ ಕಾಡುತಿಹುದು!

(ಶ್ರೀನಿವಾಸ ಪಶುಪತಿ, 2014)

:ಸ್ವಗತ:


ಸುಖಕ್ಕಿದ್ದರೆ ಸಾಕು ಮಾರಾಯ ನಿನ್ನ ದುಃಖಕ್ಕೆ ಏನ ಮಾಡಲಿ ಹೇಳು?
ಅಲವತ್ತು ಹೊರೆಹೊತ್ತು ಕಿರಿಕಿರಿಯ ಕರೆ ಮಾಡಿ
ಪರಚಿ ರಂಪ ಮಾಡಿ ಸಿಗುವುದಾದರೂ ಏನು?
ನಿನ್ನ ಕಷ್ಟಕ್ಕೆ ನಾನೇನು ಹೊಣೆಹೊರಲಿ?
ಲಾಭವಿಲ್ಲದೆ ವ್ಯಾಪಾರವಿಲ್ಲದಿರೆ ಮನಸುಗಳ ವ್ಯಾಪಾರ ಹೇಗೆ ಭಿನ್ನ?
ಹೇಳು ಚಿನ್ನ!

ನನ್ನಿಷ್ಟ ಹೀಗೆ ಇರುವುದಾದರೆ ಇರು ಬಿಡುವುದಾದರೆ ಬಿಡು
ಭಗವಂತ ಎಡಬಿಡದೆ ಕಾಯಲೊಲ್ಲ, ನಾನೆಷ್ಟರವಳು?
ಇರುವುದೇ ಹೀಗೆ ನೋಡು...
ನೋವಿನ ಮಾತು ಬೇಡ, ತಲೆನೋವು ತರಬೇಡ
ನಿನ್ನ ನೋವಿಗೆ ನಾನು ಕೊಡಲಿ ಏನ?
ನಿನ್ನ ತಲೆ ನಿನ್ನ ಕೈ!

ಮಾಡಿಟ್ಟ ಅಡುಗೆ ಇದ್ದಲ್ಲೇ ಇದೆ ನೋಡು ನಿನಗೆಷ್ಟು ಸೊಕ್ಕು?
ಬಂದು ಬಡಿಸಿದರಷ್ಟೆ ಕಂಡೀತೆ ಪ್ರೀತಿ? ತಿನಬಾರದೆ?
ಬಡಿವಾರ ಅನಕೋತಿ ಇದದ್ದು ಹೇಳಿದರೆ... ಪರಿ ಪರಿಯ ಹೇಳಿದರು ತಿಳಿಯಲೊಲ್ಲೇ?
ಪ್ರೀತಿ ಪ್ರೇಮದ ನಡುವೆ ಸ್ವಾರ್ಥವೆಲ್ಲಿದೆ ಹೇಳು.. ನಿನ್ನ ಪಾಡಿಗೆ ನೀನು ಇರಬಾರದೇ?
ನನ್ನ ಪಾಡಿಗೆ ನನ್ನ ಇರಲುಬಿಟ್ಟು?

ಎಂದೋ ನಡೆದದ್ದು ಇಂದು ಇರಬಹುದೇ ... ಉಟ್ಟ ಬಟ್ಟೆ ಸುಕ್ಕಾಗದಿದ್ದೀತೆ?
ಹೊಸ ಪ್ರೀತಿ ಹಳೆಯದಾಗದಿದ್ದೀತೆ?
ಹುಚ್ಚು ನಿನಗೆಲ್ಲೋ... ಮೊದಲ ದಿನದ ಇಬ್ಬನಿಯ ಹಾಗೇನೆ
ಇದ್ದ ಹಾಗೆಯೇ ಇರಲು ಸಾಧ್ಯವೇ ಹೇಳು ಅಷ್ಟು ದಿನದಿಂದ!

(ಶ್ರೀನಿವಾಸ ಪಶುಪತಿ, 2014)

Friday, August 12, 2011

ಮೊಗೆದಷ್ಟೂ ತಲ್ಲಣ, ತೆರೆದಷ್ಟೂ ಅಚ್ಚರಿ!ಇಂದಿರಾತನಯ, ಸತ್ಯಕಾಮರಂತಹ ಕೆಲವರನ್ನು ಬಿಟ್ಟರೆ ಸಾಮಾನ್ಯವಾಗಿ ಕನ್ನಡದ ಕಾದಂಬರಿಕಾರರು ವಾಮಾಚಾರದಂತಹ ವಸ್ತುವನ್ನು ಕೈಗೆತ್ತಿಕೊಂಡಿದ್ದು ವಿರಳವೇ. ಏಕೆಂದರೆ ಅದೊಂದು ನಿಗೂಢ ಜಗತ್ತು. ಅಲ್ಲಿ ನಡೆಯುವ ಕ್ರಿಯೆಗಳೆಲ್ಲ ಶಿಷ್ಟ ಜಗತ್ತಿನಲ್ಲಿ ಎಂದೂ ಸಲ್ಲದ ಭಯಾನಕ ನಿಷಿದ್ಧ ಕರ್ಮಗಳು. ಅಂತೆಯೇ ವಾಮಾಚಾರಿಗಳು, ಅಘೋರಿಗಳಂತಹ ಉನ್ನತ ಸಾಧಕರೇ ಯಾಕೆ, ಮನೆ ಮುಂದೆ ಭಿಕ್ಷಕ್ಕೆ ಬರುವ ಎಣ್ಣೆ ಜೋಗೇರನ್ನೂ ಕಂಡು ಬೆಚ್ಚುವವರೂ ಇದ್ದಾರೆ.

ಬೆಂಗಳೂರಿನಲ್ಲೂ ಹಲವೆಡೆ ಈಥರದವರನ್ನು ಕಾಣುವುದಿದೆ. ಇವರಲ್ಲಿ ಅಸಲಿ ನಕಲಿಗಳನ್ನು ಗುರುತಿಸುವುದೂ ನಮ್ಮಂತಹವರಿಗೆ ಕಷ್ಟವೇ! ಕ್ಷುದ್ರಾರಾಧನೆಯ ಬಗೆಗಿನ ನಮ್ಮ ಅಪೂರ್ವ ಜ್ಞಾನ ಅಷ್ಟರಮಟ್ಟಿಗಿನದು. ಅದು ಮಾಟಗಾರರ, ವಾಮಾಚಾರಿಗಳ, ಗುಪ್ತಸಿದ್ಧಿಗಳ ಜಗತ್ತು. ಯಾರೆಂದರವರು ಅಲ್ಲಿ ಪ್ರವೇಶಿಸಲಾಗದು. ಆ ನಿಗೂಢ ಜಗತ್ತಿನ ಒಳ ಹೊರಗಿನ ಕಥಾನಕವನ್ನು ರೋಚಕವಾಗಿ ಸೃಜಿಸಬಲ್ಲ ಅಪೂರ್ವ ತಾಕತ್ತು ರವಿ ಬೆಳಗೆರೆಯಂತಹವರಿಗೆ ಮಾತ್ರ ಇರಲು ಸಾಧ್ಯ. ’ಮಾಟಗಾತಿ’ಯ ಯಶಸ್ಸು ಅದಕ್ಕೆ ಜ್ವಲಂತ ಸಾಕ್ಷಿ.

’ಸರ್ಪ ಸಂಬಂಧ’ ಈ ಹಿಂದೆ ಹೇಳಿದಂತೆ ನಿಗೂಢ ಆಚರಣೆಗಳನ್ನು ನಂಬಿ ಆಚರಿಸುವ ಜನರ ನಡುವೆ ಹುಟ್ಟಿಕೊಳ್ಳುವ ಕಾದಂಬರಿ. ’ಸರ್ಪ ಸಂಬಂಧ’ ’ಮಾಟಗಾತಿ’ಯ ಮುಂದುವರಿಕೆ ಎನ್ನುವುದನ್ನು ಮರೆತರೂ ಅಂತಹ ವ್ಯತ್ಯಾಸವೇನಾಗದು. ಇದು ಅದಕ್ಕಿಂತಲೂ ರೋಚಕವಾದ ಪ್ರಪಂಚವೇ! ಇದು ಬರೀ ಸರ್ಪಾರಾಧಕರ ಕಥನವಲ್ಲ. ಶಿಷ್ಟ-ಪರಿಶಿಷ್ಟ ಸಾಧಕರ ನಡುವಿನ ಯಾವತ್ತೂ ಕದನದ ಸರಳ ಸಂಗ್ರಹವೂ ಅಲ್ಲ. ಮನುಷ್ಯ ಸ್ವಭಾವಗಳ-ಸಂಬಂಧಗಳ ಸರಳ ಬಂಧದಂತೆ ಕಂಡರೂ ಒಳಗೇ ಅಚ್ಚರಿಗಳನ್ನು ಕಟ್ಟಿಕೊಡುವ ಪ್ಯಾಂಡೋರಾ ಬಾಕ್ಸ್! ಮೊಗೆದಷ್ಟೂ ತಲ್ಲಣ, ತೆರೆದಷ್ಟೂ ಅಚ್ಚರಿ!

ಇಲ್ಲಿ ಸರ್ಪ ಕೇವಲ ಸರೀಸೃಪವಲ್ಲ; ಮತ್ತು ಅಗ್ನಿನಾಥ, ಇನಿ, ತೇಜಮ್ಮ ಮತ್ತಿತರ ಪಾತ್ರಗಳು ನಿಮಿತ್ತ ಮಾತ್ರವೂ ಅಲ್ಲ. ಸರ್ಪ ನಮ್ಮ ಕುತೂಹಲದ; ಕುತ್ಸಿತತನದ, ಮೌಢ್ಯದ ಪ್ರತೀಕವಾಗಿ ನಿಂತರೆ, ಅದರ ಸುತ್ತ ಬಿಚ್ಚಿಕೊಳ್ಳುತ್ತ ಹೋಗುವ ಅಗ್ನಿನಾಥನಾದಿಯಾದ ಪಾತ್ರಗಳು ಮನುಷ್ಯ ಸಂಬಂಧಗಳನ್ನು, ಸ್ವಭಾವಗಳನ್ನು ಒರೆಗಿಡುವ ಸನ್ನಿವೇಶಗಳಿಗೆ ಪೂರಕವಾಗಿ ಮತ್ತೆ ಮತ್ತೆ ಪರೀಕ್ಷಿಸುವ ಸಾಕ್ಷಿಗಲ್ಲುಗಳಾಗಿ ನಿಲ್ಲುತ್ತವೆ. ’ಸರ್ಪ ಸಂಬಂಧ’ವಾದ ಗಾಬರಿಗಳು, ಕಳವಳಗಳು ನಿಗೂಢ ಆಚರಣೆಗಳ ಚೌಕಟ್ಟಿನೊಳಗೆ, ಮನುಷ್ಯ ಸಹಜ ವಿಹ್ವಲತೆಯ ಆವರಣದೊಳಗೇ ಪರಿಪಕ್ವವಾಗುತ್ತ ನಡೆಯುವ ಸನ್ನಿವೇಶಗಳು, ಪ್ರೇಮ-ಕಾಮೆ-ಮಮಕಾರ-ಮಾತ್ಸರ್ಯದ ಹಲವು ಹಳವಂಡಗಳಾಗಿ ಪ್ರಕಟವಾಗುತ್ತವೆ.

ಇಡೀ ಕಾದಂಬರಿ ಗೆಲ್ಲುವುದು ರವಿಬೆಳಗೆರೆಯವರು ಕಟ್ಟಿಕೊಡುವ ಸೂಕ್ಷ್ಮಾತಿಸೂಕ್ಷ್ಮ ವಿವರಗಳಿಂದಾಗಿ. ಕಾದಂಬರಿಯನ್ನು ಓದುತ್ತ ಹೋದಂತೆ ಪೂರಕ ಸಾಹಿತ್ಯದ ಅಧ್ಯಯನ ರವಿಯವರು ಯಾವ ಪರಿಯಲ್ಲಿ ಮಾಡಿದ್ದರೆನ್ನುವುದು ಒಂದು ತರಹದ ಗಾಬರಿಯನ್ನೂ ಬೆರಗನ್ನೂ ಹುಟ್ಟಿಸುತ್ತದೆ. ಪ್ರಾಯಶಃ ಇದನ್ನು ಟಿಪಿಕಲ್ ರವಿ ಬೆಳಗೆರೆಯವರ ಸ್ಟೈಲ್ ಎಂದು ಕರೆಯಬಹುದು. ಒಂದು ಜನಪ್ರಿಯ ಕಾದಂಬರಿ ಸಾಹಿತ್ಯದ ಹಾಗೆ ಫಕ್ಕನೆ ಕಂಡರೂ ಒಳಗೊಳಗೇ ಸೂಕ್ಷ್ಮವಾದ ಮಾನವಶಾಸ್ತ್ರೀಯ, ಮನಃಶಾಸ್ತ್ರೀಯ ವಿನ್ಯಾಸಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನೂತನ ಮಾದರಿಯಾಗಿ ’ಸರ್ಪ ಸಂಬಂಧ’ ನಿಲ್ಲುತ್ತದೆ.

ಪಶುಪತಿ ಶ್ರೀನಿವಾಸ

ರವಿ ಬೆಳಗೆರೆಯವರ ’ಸರ್ಪ ಸಂಬಂಧ’ ಕಾದಂಬರಿಗೆ ಬರೆದ ’ಪ್ರವೇಶ’ದಿಂದ, ೨೦೦೦, ಧಾರಿಣಿ ಪ್ರಕಾಶನ (Picture courtesy - Internet)

Monday, August 1, 2011

ನಿಂತುಹೋಯಿತಾ ಮಳೆ?!ಈಗಷ್ಟೇ ಮಣ್ಣ ಹಸಿ ವಾಸನೆ ಹರಡತೊಡಗಿತ್ತು-
ಗಾಳಿ ತಂಪನೊರೆಯುತ್ತಿತ್ತು
ದೂರದಲ್ಲೆಲ್ಲೊ ಛಟೀಲನೆ ಸಿಡಿಲು ಬಿದ್ದಿತ್ತು!
ಅಂಗಳದ ಮಲ್ಲಿಗೆಯಂಟಿನ ಎಲೆಯ ಕೊನೆಯಲ್ಲಿ ಹನಿಗೂಡಿ ತೊನೆಯುತ್ತಿತ್ತು
ಮನ ಧನ್ಯವಾಗುತ್ತಿತ್ತು
ಏನೋ ನೆನಪಾಗುತ್ತಿತ್ತು
ಎಲ್ಲೋ ಮಗು ನಗುತ್ತಿತ್ತು, ಮುದಗೊಳ್ಳುತ್ತಿತ್ತು!

ಬೇಸಗೆಯ ಕಾವು ಕಳೆಯುತ್ತಿತ್ತು-
ಕಣ್ಣು ಹತ್ತಿತ್ತು, ಕನಸು ಮೂಡುತ್ತಿತ್ತು
ಸಾಗರದ ಒಡಲೊಳಗೆ ಚಿಪ್ಪು ಬಾಯಿ ತೆರೆಯುತ್ತಿತ್ತು,
ಹನಿ ಸೇರಿದ್ದರೆ ಮುತ್ತಾಗುತ್ತಿತ್ತು
ಪ್ರೇಯಸಿಯಿದ್ದಿದ್ದರೆ ಸಲ್ಲಾಪವಾಗುತ್ತಿತ್ತು,
ಪದ್ಯ ಕುಡಿಯೊಡೆಯುವುದಿತ್ತು,
ಅಂಗೈ ಚಾಚಿದ್ದರೆ ಒದ್ದೆಯಾಗುತ್ತಿತ್ತು,
ಪ್ರಕೃತಿಯ ಅಗಾಧ ಕೃಪೆಯ ನಡುವೆ ಪ್ರಾರ್ಥನೆಯಗುತ್ತಿತ್ತು.
ಮರೆತ ಮಾತು ಸುಳಿಯುತ್ತಿತ್ತು-
ಸಣ್ಣನೆ ಚಳಿಗೆ ಹೊದ್ದ ಚದ್ದರದೊಳಗೇ ಬೆಚ್ಚನೆಯ ಗೂಡಾಗುತ್ತಿತ್ತು.

ನಿಂತೇ ಹೋಯಿತಾ ಮಳೆ?
ಬೇಸಗೆಯುಗಿ ಹೇಗೆ ಹರಡುತ್ತೆ ನೋಡು! ನಿಂತ ಗಾಳಿಗೆ ಎಲೆಯೆಲೆಯು ನಿಶ್ಚಲ-
ಬೆನ್ನೆಲ್ಲ ಬೆವರು, ದುಸ್ವಪ್ನದ ನಡುವೆ ಎದ್ದವರ ಹಾಗೆ!
ಫ್ಯಾನು ಹಾಕಿ ಮಲಗಬೇಕು,
ಬೆವರು ನಿಂತರು ನಿಂತೀತು, ನಿದ್ರೆ ಬಂದೀತು,
ಕನಸು ಮತ್ತೆ ಬಂದರೂ ಬಂದೀತು.
ಥೇಟು ಬೇಸಗೆಯ ನಡುವೆ ಬಂದ ಮಳೆಯ ಹಾಗೇ!

ಚಿತ್ರಕೃಪೆ - ಅಂತರ್ಜಾಲ

Monday, July 11, 2011

ಇನ್ಷಿಯಲ್ಲುಸ್ಕ್ರೀನ್ ಮೇಲೆ ಪದೇ ಪದೇ ಮೂಡುತ್ತಿದ್ದ ಇನ್ಸ್ಟ್ರಕ್ಷನ್ ಅನ್ನು ಗಮನಿಸಿ ವಿಟಿಆರ್ ಆನ್ ಮಾಡಿ ಹೈದರಾಬಾದ್ ನಿಂದ ಬಂದ ನ್ಯೂಸ್ ಬ್ರೀಫ್ ಅನ್ನು ರೆಕಾರ್ಡ್ ಮಾಡಿಕೊಂಡು ಓಕೆ ಮಾಡಿದ. ನ್ಯೂಸ್ ಎಡಿಟಿಂಗ್ ಸೆಕ್ಷನ್ ಗೆ ಕ್ಯಾಸೆಟ್ ಅನ್ನು ರವಾನಿಸಿ ವಿಶ್ರಮಿಸತೊಡಗಿದ.

ಎಂತದೋ ಕಳವಳ, ಹುಡುಕಾಟ, ಹಪಾಪಿಕೆ. ಎಲ್ಲ ಶುರುವಾಗಿದ್ದು ಎರಡೇ ದಿನಗಳ ಹಿಂದೆ. ಪ್ರಸ್ತುತ ಕೆಲಸ ಬಿಟ್ಟು ಯಾವುದಾದರೂ ಆಡ್ ಏಜೆನ್ಸಿಯಲ್ಲಿ ಕೆಲಸ ಮಾಡುವುದೆಂದು ಯೋಚಿಸಿದಾಗಲೇ, ಏಜೆನ್ಸಿಯ ಎಂ.ಡಿ. ಕೇಳಿದ್ದ-
ಹೆಸರು?
ಮಹದೇವು
ಇನ್ಶಿಯಲ್ಲು?
ಇಲ್ಲ
ಇಲ್ಲ?? ಇಲ್ಲ!!
ಹೌದು. ಇಲ್ಲ...

ಇನ್ಶಿಯಲ್ಲು ಇಲ್ಲಾಂದ್ರೆ ಏನರ್ಥ? ಕುಲಗೋತ್ರ ಗೊತ್ತಿಲ್ಲದವರೆಲ್ಲ ಅರ್ಜಿ ಹಾಕಿ ಬಿಡುತ್ತಾರೆ... ಎಂದು ಗೊಣಗಿಕೊಂಡಿದ್ದು ಅಸ್ಪಷ್ಟವಾಗಿ ಕಿವಿ ತಲುಪಿತು.

ಮೈ ಉರಿಯಿತಾದರೂ ಏನೂ ಮಾಡುವಂತಿರಲಿಲ್ಲವಾಗಿ ಮೌನವಾಗುಳಿದ. ನಮ್ಮಪ್ಪ ನಂಗೆ ಇನ್ಶಿಯಲ್ಲು ಯಾಕಿಡಲಿಲ್ಲ? ಅನ್ನುವ ಪ್ರಶ್ನೆಯೊಂದು ಮನದಲ್ಲಿ ಹಣಕಿತು. ಅದೊಂದು ದಿನ ತೀರಾ ಸಣ್ಣವನಿರುವಾಗ ಅಪ್ಪನನ್ನು ಕೇಳಿದ್ದ - ಅಪ್ಪ ನನಗ್ಯಾಕೆ ಇನ್ಶಿಯಲ್ ಇಲ್ಲ? ಅಪ್ಪ ಮೀಸೆಯಡಿ ನಕ್ಕು - ಮಾದೇವು ಇನ್ಶಿಯಲ್ಲು ಅಂದ್ರೆ ಗೊತ್ತೇನೋ? ಹ್ಞಾಂ... ಇನ್ಶಿಯಲ್ಲು ಅಂದ್ರೆ ನಿನ್ನ ಹೆಸರಿಗೆ ಅಪ್ಪನ ಹೆಸರೋ ಮನೆತನದ ಹೆಸರೋ ಊರಿನ ಹೆಸರೋ ಮೊಟಕುಗೊಳಿಸಿ ಅಂಟಿಸಿಕೊಳ್ಳುವುದು ಅಂತ. ನನ್ನ ನೆರಳಾಗಲಿ ನನ್ನ ಹಿರಿಯರ ನೆರಳಾಗಲಿ ನನ್ನೂರಿನ ಹೆಸರಾಗಲಿ ನಿನಗಂಟಬಾರದು ಕಣೋ.. ನಿನ್ನನ್ನು ಜನ ನಿನ್ನ ಹೆಸರಿನಿಂದಲೇ ಗುರುತಿಸಬೇಕು, ಇನ್ಶಿಯಲ್ಲು ಬೇಡ ಮರೀ ಅಂದಿದ್ದ.

ಜೊತೆಗಾರರೆಲ್ಲ ಹೆಸರಿನೊಂದಿಗೆ ಇನ್ಶಿಯಲ್ಲು ಸೇರಿಸಿ ಬರೆಯುವುದು ತನಗೆ ಇನ್ಶಿಯಲ್ಲೇ ಇಲ್ಲದಿರುವುದು ಒಂಥರಾ ಬಾಲ್ಯವೆಲ್ಲ ಕಾಡಿತ್ತು, ಸತಾಯಿಸಿತ್ತು. ತನಗೂ ಒಂದು ಇನ್ಶಿಯಲ್ಲು ಬೇಕೆಂಬ ಬಯಕೆ ಹೆಚ್ಚಾದಂತೆಲ್ಲ ತನ್ನ ಹೆಸರಿನ ಮುಂದೆ ಮನಸ್ಸಿಗೆ ಬಂದಷ್ಟು ಇನ್ಷಿಯಲ್ಲು ಹಾಕಿ ನೋಡಿ ಖುಷಿಪಡುತ್ತಿದ್ದ. ಅದೂ ಎಷ್ಟೊಂದು ಇನ್ಶಿಯಲ್ಲುಗಳು ಅಂತೀರಿ?! ಯು.ಈ.ಐ.ಹೆಚ್.ಎ.ಪಿ.ಆರ್.ಮಹದೇವು!! ಯಾಕಲೇ ಇಸೋಕೋಂದು ಇನ್ಶಿಯಲ್ಲು ಅಂತ ಗೆಳೆಯರು ಕೇಳಿದರೆ ಮಹದೇವು ಹೇಳುತ್ತಿದ್ದ - ಯು ಅಂದ್ರೆ ಯೂನಿವರ್ಸ್, ಈ ಅರ್ಥ್, ಎ ಏಷ್ಯಾ, ಐ ಇಂಡಿಯಾ, ಕೆ ಕರ್ನಾಟಕ, ಹೆಚ್ ಹಾಸನ ಜಿಲ್ಲೆ, ಎ ಆಲೂರು ತಾಲೂಕು, ಪಿ ಪಾಳ್ಯ, ಆರ್ ರಂಗಣ್ಣನ ಮಗ ಮಹದೇವು ಅಂತ. ಜೊತೆಗೆ ಗೆಳೆಯರನ್ನೆಲ್ಲ ಹೀಗೆಳೆಯುತ್ತಿದ್ದ, ನಿಮ್ಮೆಲ್ಲ ಅಪ್ಪಂದಿರು ಇನ್ಶಿಯಲ್ಲು ಇಟ್ಟವರೆ. ನೀವು ಇಟ್ಟಷ್ಟೆ ಇಟ್ಟಂತ ಇನ್ಶಿಯಲ್ಲು ಬರಕೋಬೇಕು. ನಾನು? ಏಸೋಕೊಂದು ಬೇಕಾದ್ರು ಬರ್ಕಬೌದು ಗೊತ್ತಾ? ಅಂತ. ಎಷ್ಟು ಇನ್ಶಿಯಲ್ಲು ಬರಕೊಂಡರೂ ಅಟೆಂಡೆನ್ಸ್ ಕೂಗುವಾಗ ಮೇಸ್ಟ್ರು ಬರೀ ಮಹದೇವು ಅಂತ ಕರೆಯುವಾಗ ಗೆಳೆಯರೆಲ್ಲ ಮುಖ ನೋಡಿ ನಕ್ಕಾಗ ಮನಸ್ಸಿಗೆ ಚುರುಕ್ ಅನ್ನಿಸುತ್ತಿತ್ತು. ಕಾಲೇಜಿಗೆ ಬರುವಷ್ಟರಲ್ಲಿ ಅವನನ್ನು ವಿಪರೀತ ಅಟ್ಟಾಡಿಸಿಬಿಟ್ಟಿತ್ತು.

ಕಾಲೇಜಿನ ದಿನಗಳಲ್ಲಿ ತನ್ನ ಹೆಸರನ್ನು ಯಂ.ದೇವು ಅಂತ ಬರೆದುಕೊಳ್ಳಲು ನಿರ್ಧರಿಸಿದ. ಕೆಲದಿನ ಚೆನ್ನಾಗಿಯೇ ಇತ್ತು. ನಂತರ ಕ್ಲಾಸಿನ ಹುಡುಗಿಯರೆಲ್ಲಾ ಏನಪ್ಪಾ ಯಮದೇವು... ಎಲ್ಲಿ ನಿನ್ನ ವಾಹನ? ಅಂತ ಛೇಡಿಸತೊಡಗಿದಾಗ ಯಂ.ದೇವು ಮತ್ತೆ ಮಾದೇವು ಆಗಿದ್ದ. ಅವನ ಇನ್ಶಿಯಲ್ ಕಾಳಜಿ ಅರಿತಿದ್ದ ಕೆಲ ಗೆಳೆಯರು ಅವನನ್ನು ಎಂ.ಡಿ. ಅಂತ ಕರೆಯಲು ಶುರುಮಾಡಿದರು. ಆ ಖುಷಿಯೂ ಎಂ.ಡಿ. ಇನ್ಶಿಯಲ್ಲುಗಳಿಗೆ ಮಸಾಲೆ ದೋಸೆ, ಮಾಸ್ಟರ್ ಆಫ್ ಡೌಟ್ಸ್, ಮೆಂಟಲ್ ಡಾಕ್ಟರ್ ಅಂತೆಲ್ಲ ವರ್ಷನ್ ಸಿಕ್ಕಾಗ ಕೊನೆಗೊಂಡು ನಿರುಪಾಯನಾಗಿ ಇನ್ಶಿಯಲ್ ಇಲ್ಲದ ತನ್ನ ಹೆಸರನ್ನೇ ಪೀತಿಸತೊಡಗಿದ. ಕಾಲೇಜು ದಿನಗಳು ಕಳೆದು ಡಿಗ್ರಿ ಅಂತ ಕೈಗೆ ಸರ್ಟಿಫಿಕೇಟ್ ದೊರೆತ ಮೇಲೆ ಇನ್ಶಿಯಲ್ಲು ಕಾಡುವುದು ಬಿಟ್ಟಿತ್ತು. ಮತ್ತೆ ಕೆಲಸಕ್ಕೆ ಅರ್ಜಿ ಬರೆಯುವಾಗ ಅಲರ್ಜಿಯಾಗಿ ಇರಿಸುಮುರಿಸು ಮೂಡಿಸುತ್ತಿತ್ತು. ಹಾಗೂ ಹೀಗೂ ಕೆಲಸ ಸಿಕ್ಕ ಮೇಲೆ ಬಂದ್ ಆಗಿತ್ತು. ಮಕ್ಕಿಕಮಕ್ಕಿ ಕೆಲಸ ಬೇಜಾರೆನ್ನಿಸಿ, ಸ್ವಲ್ಪ ಕ್ರಿಯೇಟಿವ್ ಆಗಿರುವ ಕೆಲಸ ನೋಡೋಣ ಅನ್ನಿಸಿದಾಗಲೇ ಇನ್ಶಿಯಲ್ ಕಿರಿಕಿರಿ ಶುರುಮಾಡಿದ್ದು.

ಅವತ್ತು ಸಂಜೆ ಟೀ ಕುಡಿಯಲೆಂದು ಕ್ಯಾಂಟೀನಿಗೆ ಹೋದಾಗ ಹಿತಶತೃ ಸಹೋದ್ಯೋಗಿ ಸಿಕ್ಕಿದ್ದ. ಏನೋ ಭಯಂಕರ ಕೊರೆಯತೊಡಗಿ ಹೊಟ್ಟೆ ಉರಿಸಲೇ ಕೇಳಿದ್ದ - ಮಹದೇವು, ನನಗನ್ನಿಸುತ್ತೆ ನಿಮ್ಮಪ್ಪನಿಗೆ ನೀವು ಅವರ ಮಗನೇ ಅಂತ ಹೇಳಿಕೊಳ್ಳೋಕೆ ಅನುಮಾನವಾಗಿ ಇನ್ಶಿಯಲ್ ಇಟ್ಟಿಲ್ಲ ಅನ್ನಿಸುತ್ತೆ - ಅಂದ ಕ್ಷಣ ಮಾತ್ರದಲ್ಲೇ ಅವನ ಕಾಲರ್ ಹಿಡಿದು ದೊಡ್ಡ ಗಲಾಟೆಯಾಗಿತ್ತು. ಅದಾದ ಮೇಲೆ ಅವನನ್ನು ಇನ್ಶಿಯಲ್ಲು ಗಹನವಾದ ಆಲೋಚನೆಗಳಿಗೆ ತಳ್ಳಿತ್ತು. ಮಾರನೆಯ ದಿನ ಬಾಳ ಸಂಗಾತಿಯಾಗಲಿರುವ ನೀತಾ ಅವನನ್ನು ನೋಡಲು ಬಂದಾಗಲೂ ಇನ್ಶಿಯಲ್ಲಿನ ಪುರಾಣವನ್ನು ತೋಡಿಕೊಂಡಿದ್ದ. ಈ ಬಾರಿ ಇನ್ಶಿಯಲ್ಲು ಅವನನ್ನು ಬಹಳವೇ ಕಾಡತೊಡಗಿತ್ತು. ಮನಸ್ಸಿನ ತುಂಬಾ ಎ ಬಿ ಸಿ ಡಿ ಗಳು ವೃತ್ತವೃತ್ತವಾಗಿ ಸುತ್ತತೊಡಗಿ ಅದೊಂದು ಭ್ರಮೆಗೆ ಸಿಲುಕಿಬಿಟ್ಟಿದ್ದ. ಭವಿಷ್ಯತ್ತಿಗಿಂತ ಹೆಚ್ಚಾಗಿ ಇನ್ಶಿಯಲ್ಲು ತರಬಹುದಾದ ಸಂಕಷ್ಟಗಳ ಬಗೆಗಿನ ಊಹೆಗಳೇ ಸಮಸ್ಯೆಯಾಗತೊಡಗಿತು. ಮುಂದೆ ಪ್ರತಿದಿನವೂ ಕನಸಿನಲ್ಲಿ ಇನ್ಶಿಯಲ್ಲುಗಳು ಕಾಣತೊಡಗಿ ಭೂತವಾಗಿ ಕೆಟ್ಟ ದೃಶ್ಯ ಕಂಡಂತೆ ಬೆಚ್ಚಿ ಬೀಳುತ್ತಿದ್ದ. ನಿಶ್ಚಿಂತೆಯೇ ಇಲ್ಲವಾಯ್ತು. ದಿನದಿನಕ್ಕೂ ಕೃಶವಾಗುತ್ತ ನಡೆದ. ಊಟ ತಿಂಡಿ ನಿದ್ರೆ ಎಲ್ಲೂ ತೃಪ್ತಿ ಇಲ್ಲದಾಯ್ತು.

ಊಟ ತಿಂಡಿ ಎಲ್ಲೂ ತೃಪ್ತಿ ಇಲ್ಲದಾಯ್ತು. ನೀತುಳಿಗೆ ಮಾದೇವು ಸಮಸ್ಯೆಯಾಗಿ ಕಾಡತೊದಗಿದ. ಅದೊಂದು ದಿನ ಏಕಾಂತದಲ್ಲಿ ಲಾಲಿಸಿ ಕೇಳಿದಳು. ಯಾಕೆ ಹೀಗಾಗಿದ್ದೀರಿ? ಮಾದೇವು ತನ್ನ ಅಳಲುಗಳೆಲ್ಲವನ್ನು ಕಳೆದುಕೊಳ್ಳುವಂತೆ ಅವಳಿಗೊರಗಿ ಅತ್ತು ಇನ್ಶಿಯಲ್ಲಿನ ಗೋಳು ಹೇಳಿಕೊಂಡ. ನೀತಾಳಿಗೆ ಆ ಕ್ಷಣಕ್ಕೆ ಮಾದೇವು ಸಣ್ಣ ಮಗುವಿನಂತೆ ಕಂಡ.

ವಿಪರೀತ ಕಾಳಜಿಯಿಂದ ಅವಳ ಮೃದುವಾದ ಅಂಗೈಯನ್ನು ಅವನ ಕೆನ್ನೆಯ ಮೇಲಿರಿಸಿ ಅನುನಯದಿಂದ ಕೇಳಿದಳು - ಹುಣ್ಣಿಮೆ ಚಂದ್ರ, ಹಗಲಿನ ಸೂರ್ಯ, ನಕ್ಕು ನಲಿವ ಹೂವು, ಸೊಗಸಾದ ಋತು ಯಾವುದಕ್ಕೆ ಇನ್ಶಿಯಲ್ಲು ಇದೆ ಹೇಳು? ನನ್ನ ನಿನ್ನ ಹೃದಯಗಳ ನಡುವೆ ಇರುವ ಈ ಗಾಢ ಪ್ರೀತಿಗೆ ಯಾವ ಇನ್ಶಿಯಲ್ಲು ಇದೆಯೇ? ಬೇಕೆ? ಯಾರ ಜೀವನಕ್ಕೆ ಇನ್ಶಿಯಲ್ಲು ಇದೆ ಹೇಳು? ಮರುಕ್ಷಣದಲ್ಲಿ ಮಾದೇವುವಿನ ಸಂಕಷ್ಟಗಳೆಲ್ಲ ತೀರಿಹೋದಂತೆ ಭಾಸವಾಗಿ ಅಚ್ಚರಿಯಿಂದ ನೀತಾಳ ಕಣ್ಣುಗಳೊಳಗೆ ನೋಡಿದ. ನೀತಾ ಕೆನ್ನೆಗಳಲ್ಲಿ ಗುಲಾಬಿ ಅರಳಿಸಿ ಹಗುರಾಗಿ ನಕ್ಕಳು. ಮಾದೇವು ಆ ರಂಗುಗಳಲ್ಲಿ ಹಗುರಾಗಿ ತೇಲಿಹೋದ. ನೀತುವಿನ ಮಡಿಲಲ್ಲಿ ಬಿಕ್ಕುತ್ತ ನುಡಿದ- ನೀತು ನಾವು ಬೇಗ ಮದುವೆಯಾಗಿಬಿಡೋಣ... ಮತ್ತೆ ಬೇಗ ಅಂದ್ರೆ ಬೇಗ... ಲಗ್ನಪತ್ರಿಕೆಯಲ್ಲಿ ನಿನಗೂ ಇನ್ಶಿಯಲ್ಲು ಹಾಕಿಸೋದು ಬೇಡ... ನಾಳೆ ನಮಗೆ ಹುಟ್ಟುವ ಮಕ್ಕಳಿಗೂ ಇನ್ಶಿಯಲ್ಲು ಇಡೋದು ಬೇಡ.. ಸರಿತಾನೆ? ನೀತು ಮಾದೇವನ ತಲೆ ಸವರುತ್ತ ಆಗಲೆಂಬಂತೆ ತಲೆಯಾಡಿಸಿದಳು. ಸೂರ್ಯ ಮೆಲ್ಲ ಮುಳುಗುತ್ತಿದ್ದ. ಆ ಕೆಂಪು ನಿಶಾದಿಯಲ್ಲಿ ಇಬ್ಬರೇ ಬಲುದೂರ ಕೈ ಕೈ ಹಿಡಿದು ನಡೆಯುತ್ತಲೇ ಇದ್ದರು. ಇನ್ಶಿಯಲ್ಲೇ ಇಲ್ಲದ ಜಗತ್ತು ನಿಧಾನವಾಗಿ ಜೊತೆ ಕೊಡುತ್ತಿತ್ತು. ಮುಂದೆಂದೂ ಇನ್ಶಿಯಲ್ಲು ಮಹದೇವುವನ್ನು ಕಾಡಲಿಲ್ಲ

(Image courtesy: Internet)

Thursday, September 24, 2009

ಅದಕ್ಕೂ ಮುಂಚೆ ಯಾವಳಿದ್ದಳು?ಡಿಯರ್,

ನೀನು ಮುನಿಸಿಕೊಂಡು ಹೋದೆ. ನೀನು ಹೋದ ದಾರಿಯನ್ನೆ ಸುಮ್ಮನೆ ದಿಟ್ಟಿಸುತ್ತ ಕುಳಿತುಬಿಟ್ಟೆ. ಸ್ವಲ್ಪ ಹೊತ್ತಿನ ನಂತರ 'ಇದೇನು ಅವಿವೇಕಿ ಹುಡುಗಿ ಗಂಟುಬಿದ್ದಳು ನನಗೆ' ಎಂದು ಬೈದುಕೊಂಡು ಜಾಗ ಖಾಲಿ ಮಾಡಿದೆ. ಯಾಕೋ ಲಾಲ್ ಬಾಗನ್ನು ಬಿಟ್ಟುಬರುವಾಗ ಅನಿರ್ವಚನೀಯ ಮೌನ ಕವಿದುಕೊಂಡಿತು. ತೆಕ್ಕೆ ಬಡಿದುಕೊಂಡು ಹರಟುತ್ತಿದ್ದ ಜೋಡಿಗಳನ್ನು ನೋಡಿಕೊಂಡೇ ಹೆಜೆ ಎತ್ತಿಟ್ಟಿದ್ದೆ. ನಿನ್ನ ಮೂಡು ಸರಿಯಾಗಿದ್ದಿದ್ದರೆ ಬಹುಶಃ ಲಾಲ್ ಬಾಗಿನ ಎಲ್ಲ ಜೋಡಿಗಳನ್ನು ಹೋಲ್ ಸೇಲ್ ಆಗಿ ಮೀರಿಸುವಷ್ಟು ಹರಟಬಹುದಿತ್ತೇನೋ!

Alright, ನಿನ್ನ ಮುನಿಸು ಯಾವ ತರದ್ದೋ ನನಗೆ ಗೊತ್ತು. ಮನೆಗೆ ಹೋದವಳು ಕೋಣೆಯ ಕದವಿಕ್ಕಿ ಮುಳುಮುಳು ಅಳುತ್ತೀಯ. ಇಡೀ ದಿನದ ಅವಾಂತರಗಳಿಗೆ ನಾನು ಕಾರಣ ಅಂತ ವಾಚಾಮಗೋಚರವಾಗಿ ಬೈದುಕೊಂಡಿರುತ್ತೀಯ. ಉಗಿದು ಉಪ್ಪು ಹಾಕಿರುತ್ತೀಯ. ಅದೂ ಮಾಮೂಲೇ! ಯಾವತ್ತು ತಪ್ಪು ನಿನ್ನದಾಗಿತ್ತು ಹೇಳು?


ಇಷ್ಟಕ್ಕೂ ಅನ್ನಬಾರದ್ದು ನಾನೇನಂದಿದ್ದೆ? ಈ ಕ್ಷಣ್ದವರೆಗೂ ನನಗೆ ನಿಗೂಢವನ್ನು ಬೇಧಿಸಲು ಸಾಧ್ಯವಾಗಿಲ್ಲ. 'ನನ್ನ ಜೀವನದಲ್ಲಿ ನೀನು ಇನ್ನೂ ಮುಂಚೆ ಬರಬೇಕಾಗಿತ್ತು' ಅನ್ನುವ ನನ್ನ ಮಾತಿನಲ್ಲಿ ನಿನ್ನ ಮನಸ್ಸನ್ನು ಕಲಕುವಂತದ್ದು ಏನಿತ್ತು? 'ಅದಕ್ಕೂ ಮುಂಚೆ ಯಾವಳಿದ್ದಳು?' ಎಂದು ಕೆರಳಿ ಕೇಳುವ ಪ್ರಮೇಯವೇನಿತ್ತು?
 
ಕಾಮತ್ ಕೆಫೆಯಲ್ಲಿ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಹೀರಬೇಕಿದ್ದ ಕಾಫಿ ಮುಂಡಮೋಚಿಕೊಂಡಿತು. ತೀರದ ನಿರಾಸೆಯೊಂದು ಮನದ ತುಂಬ ಅನುರಣಿಸಿತು. ಮರುಕ್ಷಣವೇ ನನ್ನನ್ನು ಯಾವಾಗಲೂ ಅಪಾರ್ಥ ಮಾಡಿಕೊಳ್ಳುವ ನಿನ್ನ ಅವಿವೇಕದ ಬಗೆಗೆ ಅನುಕಂಪ ಮೂಡಿತು.
ಒಂದು ಮಾತು ಹೇಳಲಾ? ನೀನು ಮುನಿಸಿಕೊಂಡು ಹೊರಟುಹೋಗಿದ್ದಕ್ಕೆ ಇಡೀ ಲಾಲ್ ಬಾಗ್ ರೋಧಿಸುತ್ತಿತ್ತು.

'ನಾಳೆ ಬರ್ತಾಳೆ' ಅಂತ ಅನುನಯದಿಂದ ಹೇಳಿಬಂದಿದ್ದೇನೆ.
 ಬರ್ತೀಯ ತಾನೆ?

ಉಳಿದದ್ದು ಮೊಕ್ತಾ,
ವಾಸೀ.

ಲಾಂಗ್ ಲೀವ್ ಟೆಲಿಫೋನ್ ಎನ್ನೇ ಚಿನ್ನಾ!

(ಈ ಅಂಕಣ ಬರೆಯುವ ಹೊತ್ತಲ್ಲಿ ಮೊಬೈಲುಗಳ ಕಲರವ ಇನ್ನೂ ಇಷ್ಟಿರಲಿಲ್ಲ. ಪ್ರೇಮ ಸಂದೇಶಗಳನ್ನು ತಲುಪಿಸಲು ಈ ಮೈಲುಗಳು ಇರಲಿಲ್ಲ. ಇದ್ದದ್ದು ಅದೇ ಲ್ಯಾಂಡ್ ಲೈನು)


ಆತನಿಗೆ ನನ್ನ-ನಿನ್ನಂತಹ ಲಕ್ಷಾಂತರ, ಕೋಟ್ಯಾಂತರ ಪ್ರೇಮಿಗಳ ಕೃತಜ್ನತೆಗಳು ಸಲ್ಲಬೇಕು! ಆತನ ಅನ್ವೇಷಣೆಯೇ ಅಂತಹುದು.

ಅದು ಟೆಲಿಫೋನ್!

ಮೈ ಡಿಯರ್, ಎಷ್ಟು ಸಲ ಯೋಚಿಸಿದ್ದೇನೆ- ಅಕಸ್ಮಾತ್ ಈ ಟೆಲಿಫೋನ್ ಎನ್ನುವ ಅದ್ಭುತ ಯಂತ್ರವೊಂದು ಇಲ್ಲದೇ ಹೋಗಿದ್ದರೆ ನಮ್ಮಿಬ್ಬರ ನಡುವೆ ಅದೆಷ್ಟು ದೊಡ್ಡ ಕಂದಕ ಇರುತ್ತಿತ್ತು! ಆಡಬೇಕಾದ ಮಾತುಗಳು, ಕೊಡಬೇಕಾದ ಮುತ್ತುಗಳು ಎಲ್ಲ ಉಳಿದೇ ಹೋಗುತ್ತಿತ್ತಲ್ಲ!
* * *
ಬ್ಲಾಂಕ್ ಕಾಲ್ ಗಳು ಏನನ್ನೂ ಹೇಳದಿದ್ದರೂ ಒಂದು ಮಾತನ್ನಂತೂ ಸ್ಪಷ್ಟವಾಗಿ ಹೇಳಿಬಿಡುತ್ತವೆ "ನಾನಿಲ್ಲಿ ಕಾದಿದ್ದೇನೆ - ಬದುಕಿದ್ದರೆ ದಯವಿಟ್ಟು ಫೋನ್ ಮಾಡು...". ನಿನ್ನ ಗದರಿಕೆ ನನಗೆ ಅರ್ಥವಾಗುತ್ತದೆ. ಅದರೇನು ಮಾಡಲಿ? ಎದುರಿಗೆ 'ಮೊಳೆ' ಹೊಡೆಯುತ್ತಿರುವ ಬಡ್ಡೀಮಗ ಸುತರಾಂ ಎದ್ದು ಹೋಗುತ್ತಿಲ್ಲ. ಕಳಿಸುವ ದಾರಿ? ದೇವರೇ ಬಲ್ಲ!
* * *
ಟ್ರಿನ್... ಟ್ರಿನ್... ಟ್ರಿನ್...
ಇದು ಮೂರನೇ ಬ್ಲಾಂಕ್ ಕಾಲ್.
"ಕೇಳಿಸ್ತೇನೋ?"
ಅಮ್ಮ ಹೇಳಬೇಕಾದ್ದನ್ನೆಲ್ಲ ಒಂದೇ ಪ್ರಶ್ನೆಯಲ್ಲಿ ಅಡಗಿಸಿ ಹೇಳುತ್ತಾಳೆ. ನನಗಿಂತಲೂ ಆಕೆಗೆ ತನ್ನ ಭಾವಿ ಸೊಸೆಯ ತಹತಹ, ಕಾತುರಗಳು ಚೆನ್ನಾಗಿ ಅರ್ಥವಾಗುತ್ತವೆ. ಹಾಗೆ ಅವಳಿಗೆ ಅರ್ಥವಾಗುವುದರ ಬಗ್ಗೆ ನನ ಬಹಳಷ್ಟು ಸಲ ಹೆಮ್ಮೆಯೆನಿಸಿದರೂ - ಕೆಲಸಲ ತೀರ ಮುಜುಗರವೆನಿಸುತ್ತದೆ.
* * *
ಕನಿಷ್ಟವೆಂದರೆ ಒಂದೂವರೆ ಗಂಟೆಯಾಗಿರಬೇಕು ನಿನ್ನ ಕೊನೆಯ ಬ್ಲಾಂಕ್ ಕಾಲ್ ಸಂದೇಶ ದೊರೆತು. ಅಲ್ಲಿಂದ ಇಲ್ಲಿಯವರೆಗೆ ನಿನ್ನ ಫೋನೂ ಮುನಿದು ಕುಳಿತಿದೆ. ಎದುರು ಕುಳಿತ ಮಿತ್ರನಿಗೆ ಈ ಜಗತ್ತಿನಲ್ಲಿ ನಾನೋಬ್ಬನೇ ಸಿಕ್ಕಿರುವುದು ಅನ್ನಿಸುತ್ತೆ. ಮಾತಿನ ಗಿರಣಿ ನಡೆಯುತ್ತಲೇ ಇದೆ. ಕುಟ್ಟುತ್ತಿರುವುದೆಲ್ಲ ತೌಡೇ.. ಮುಂದೂ ಅದೇ.. ಅವನು ಹೊರಡುವ ತನಕ ಗತ್ಯಂತರವಿಲ್ಲ...

ನೀನು ಮುನಿದಿರುವೆ - ಗೊತ್ತು... But...
* * *
ಸಾರಿ ಚಿನ್ನ... ಸಧ್ಯಕ್ಕೆ ಬಿಡುಗಡೆಯಿಲ್ಲ... ತೌಡು ಕುಟ್ಟಲು ಇನ್ನೊಬ್ಬ ಮಿತ್ರ ಸೇರಿಕೊಂಡಿದ್ದಾನೆ. ಈಗಷ್ಟೇ ನಿನ್ನ ಇನ್ನೊಂದು ಟ್ರಿನ್ ಟ್ರಿನ್ ತಲುಪಿತು. ಉತ್ತರಿಸದಿರಲು ಸಾಧ್ಯವಾಗುತ್ತಿಲ್ಲ. ಎದುರು ಕುಳಿತವರಿಗೆ - ಎದ್ದು ಹೋಗಿ ಎಂದು ಹೇಳಲಾರೆ! ನಿನಗೊಂದು ಫೋನ್ ಮಾಡಲೂ ಸಾಧ್ಯವಾಗುತ್ತಿಲ್ಲ. ಇನ್ನೊಂದರ್ಧ ಗಂಟೆ ಕಾಯುತ್ತೀಯಾ please?

ಪ್ರೇಮಿಗಳ ನಡುವೆ ಟೆಲಿಪಥಿಯಂತದೇನಾದರೂ ಇರುತ್ತದೆ ಅನ್ನುವ ನಂಬಿಕೆ ನನ್ನದು. ಇದೆಯೆಂದಾದರೆ ಈ ನನ್ನ ಅನುನಯದ ಸಂಕೇತ ನಿನಗೆ ತಲುಪಲಿ.
* * *
ಅಂತೂ ಮಾತಿನ ಮನೆ ಕಟ್ಟುವ ಕುಶಲ ಕರ್ಮಿಗಳು ತೊಲಗಿದರು. ಟೆಲಿಫೋನ್ ಕೈಲಿ ಹಿಡಿದು ಕುಳಿತಿದ್ದೇನೆ. ಇನ್ನರ್ಧ ಕ್ಷಣದಲ್ಲಿ ಮೈಲುಗಟ್ಟಳೆ ತಂತಿಗಳು ನನ್ನ-ನಿನ್ನನ್ನು ಮಾತಿನಲ್ಲಿ ಬೆಸೆಯಲಿವೆ. ಇನ್ನಾದರೂ ನಿನ್ನ ಬಿಗು ಮುಖದಲ್ಲಿ ಮುಗುಳ್ನಗೆ ಕಾಣಬಹುದೇ? ಕಾಣಲಿ ಎನ್ನುವ ಹಂಬಲ ನನ್ನದು... ಸದ್ಯ - ನಿನ್ನ ದನಿಯಲ್ಲಿ ಮುನಿಸಿದ್ದರೂ ಅದನ್ನೆಲ್ಲ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ. ಕೋಪಿಸಿಕೊಂಡವರನ್ನು ಫೋನಿನಲ್ಲಿ ಸಂತೈಸುವಷ್ಟು ಮಜವಾದದ್ದು ಇನ್ನೇನಿರುತ್ತೆ? ಸೇಫ್ ಡಿಸ್ಟನ್ಸ್ ಬೇರೆ! ಅಕಸ್ಮಾತ್ ನೀನು ನನ್ನನ್ನು ಚಿಂದಿ ಉಡಾಯಿಸಬೇಕೆಂದಿದ್ದರೂ ಉಳಿದಿಕೊಳ್ಳುವ ಛಾನ್ಸಿದೆ!

ಥ್ಯಾಂಕ್ಸ್ ಟು ಅಲೆಕ್ಸಾಂಡರ್ ಗ್ರಾಹಂಬೆಲ್
ಲಾಂಗ್ ಲೀವ್ ಟೆಲಿಫೋನ್ ಬೆಲ್!

ನನ್ನ-ನಿನ್ನ ನಡುವೆ ಪ್ರೀತಿ ಮಾತು ಟ್ರಿಣಿಟ್ರಿಣಿಸುತ್ತಿರಲಿ!

ನಿನ್ನವ,
ವಾಸೀ.