Friday, August 12, 2011

ಮೊಗೆದಷ್ಟೂ ತಲ್ಲಣ, ತೆರೆದಷ್ಟೂ ಅಚ್ಚರಿ!ಇಂದಿರಾತನಯ, ಸತ್ಯಕಾಮರಂತಹ ಕೆಲವರನ್ನು ಬಿಟ್ಟರೆ ಸಾಮಾನ್ಯವಾಗಿ ಕನ್ನಡದ ಕಾದಂಬರಿಕಾರರು ವಾಮಾಚಾರದಂತಹ ವಸ್ತುವನ್ನು ಕೈಗೆತ್ತಿಕೊಂಡಿದ್ದು ವಿರಳವೇ. ಏಕೆಂದರೆ ಅದೊಂದು ನಿಗೂಢ ಜಗತ್ತು. ಅಲ್ಲಿ ನಡೆಯುವ ಕ್ರಿಯೆಗಳೆಲ್ಲ ಶಿಷ್ಟ ಜಗತ್ತಿನಲ್ಲಿ ಎಂದೂ ಸಲ್ಲದ ಭಯಾನಕ ನಿಷಿದ್ಧ ಕರ್ಮಗಳು. ಅಂತೆಯೇ ವಾಮಾಚಾರಿಗಳು, ಅಘೋರಿಗಳಂತಹ ಉನ್ನತ ಸಾಧಕರೇ ಯಾಕೆ, ಮನೆ ಮುಂದೆ ಭಿಕ್ಷಕ್ಕೆ ಬರುವ ಎಣ್ಣೆ ಜೋಗೇರನ್ನೂ ಕಂಡು ಬೆಚ್ಚುವವರೂ ಇದ್ದಾರೆ.

ಬೆಂಗಳೂರಿನಲ್ಲೂ ಹಲವೆಡೆ ಈಥರದವರನ್ನು ಕಾಣುವುದಿದೆ. ಇವರಲ್ಲಿ ಅಸಲಿ ನಕಲಿಗಳನ್ನು ಗುರುತಿಸುವುದೂ ನಮ್ಮಂತಹವರಿಗೆ ಕಷ್ಟವೇ! ಕ್ಷುದ್ರಾರಾಧನೆಯ ಬಗೆಗಿನ ನಮ್ಮ ಅಪೂರ್ವ ಜ್ಞಾನ ಅಷ್ಟರಮಟ್ಟಿಗಿನದು. ಅದು ಮಾಟಗಾರರ, ವಾಮಾಚಾರಿಗಳ, ಗುಪ್ತಸಿದ್ಧಿಗಳ ಜಗತ್ತು. ಯಾರೆಂದರವರು ಅಲ್ಲಿ ಪ್ರವೇಶಿಸಲಾಗದು. ಆ ನಿಗೂಢ ಜಗತ್ತಿನ ಒಳ ಹೊರಗಿನ ಕಥಾನಕವನ್ನು ರೋಚಕವಾಗಿ ಸೃಜಿಸಬಲ್ಲ ಅಪೂರ್ವ ತಾಕತ್ತು ರವಿ ಬೆಳಗೆರೆಯಂತಹವರಿಗೆ ಮಾತ್ರ ಇರಲು ಸಾಧ್ಯ. ’ಮಾಟಗಾತಿ’ಯ ಯಶಸ್ಸು ಅದಕ್ಕೆ ಜ್ವಲಂತ ಸಾಕ್ಷಿ.

’ಸರ್ಪ ಸಂಬಂಧ’ ಈ ಹಿಂದೆ ಹೇಳಿದಂತೆ ನಿಗೂಢ ಆಚರಣೆಗಳನ್ನು ನಂಬಿ ಆಚರಿಸುವ ಜನರ ನಡುವೆ ಹುಟ್ಟಿಕೊಳ್ಳುವ ಕಾದಂಬರಿ. ’ಸರ್ಪ ಸಂಬಂಧ’ ’ಮಾಟಗಾತಿ’ಯ ಮುಂದುವರಿಕೆ ಎನ್ನುವುದನ್ನು ಮರೆತರೂ ಅಂತಹ ವ್ಯತ್ಯಾಸವೇನಾಗದು. ಇದು ಅದಕ್ಕಿಂತಲೂ ರೋಚಕವಾದ ಪ್ರಪಂಚವೇ! ಇದು ಬರೀ ಸರ್ಪಾರಾಧಕರ ಕಥನವಲ್ಲ. ಶಿಷ್ಟ-ಪರಿಶಿಷ್ಟ ಸಾಧಕರ ನಡುವಿನ ಯಾವತ್ತೂ ಕದನದ ಸರಳ ಸಂಗ್ರಹವೂ ಅಲ್ಲ. ಮನುಷ್ಯ ಸ್ವಭಾವಗಳ-ಸಂಬಂಧಗಳ ಸರಳ ಬಂಧದಂತೆ ಕಂಡರೂ ಒಳಗೇ ಅಚ್ಚರಿಗಳನ್ನು ಕಟ್ಟಿಕೊಡುವ ಪ್ಯಾಂಡೋರಾ ಬಾಕ್ಸ್! ಮೊಗೆದಷ್ಟೂ ತಲ್ಲಣ, ತೆರೆದಷ್ಟೂ ಅಚ್ಚರಿ!

ಇಲ್ಲಿ ಸರ್ಪ ಕೇವಲ ಸರೀಸೃಪವಲ್ಲ; ಮತ್ತು ಅಗ್ನಿನಾಥ, ಇನಿ, ತೇಜಮ್ಮ ಮತ್ತಿತರ ಪಾತ್ರಗಳು ನಿಮಿತ್ತ ಮಾತ್ರವೂ ಅಲ್ಲ. ಸರ್ಪ ನಮ್ಮ ಕುತೂಹಲದ; ಕುತ್ಸಿತತನದ, ಮೌಢ್ಯದ ಪ್ರತೀಕವಾಗಿ ನಿಂತರೆ, ಅದರ ಸುತ್ತ ಬಿಚ್ಚಿಕೊಳ್ಳುತ್ತ ಹೋಗುವ ಅಗ್ನಿನಾಥನಾದಿಯಾದ ಪಾತ್ರಗಳು ಮನುಷ್ಯ ಸಂಬಂಧಗಳನ್ನು, ಸ್ವಭಾವಗಳನ್ನು ಒರೆಗಿಡುವ ಸನ್ನಿವೇಶಗಳಿಗೆ ಪೂರಕವಾಗಿ ಮತ್ತೆ ಮತ್ತೆ ಪರೀಕ್ಷಿಸುವ ಸಾಕ್ಷಿಗಲ್ಲುಗಳಾಗಿ ನಿಲ್ಲುತ್ತವೆ. ’ಸರ್ಪ ಸಂಬಂಧ’ವಾದ ಗಾಬರಿಗಳು, ಕಳವಳಗಳು ನಿಗೂಢ ಆಚರಣೆಗಳ ಚೌಕಟ್ಟಿನೊಳಗೆ, ಮನುಷ್ಯ ಸಹಜ ವಿಹ್ವಲತೆಯ ಆವರಣದೊಳಗೇ ಪರಿಪಕ್ವವಾಗುತ್ತ ನಡೆಯುವ ಸನ್ನಿವೇಶಗಳು, ಪ್ರೇಮ-ಕಾಮೆ-ಮಮಕಾರ-ಮಾತ್ಸರ್ಯದ ಹಲವು ಹಳವಂಡಗಳಾಗಿ ಪ್ರಕಟವಾಗುತ್ತವೆ.

ಇಡೀ ಕಾದಂಬರಿ ಗೆಲ್ಲುವುದು ರವಿಬೆಳಗೆರೆಯವರು ಕಟ್ಟಿಕೊಡುವ ಸೂಕ್ಷ್ಮಾತಿಸೂಕ್ಷ್ಮ ವಿವರಗಳಿಂದಾಗಿ. ಕಾದಂಬರಿಯನ್ನು ಓದುತ್ತ ಹೋದಂತೆ ಪೂರಕ ಸಾಹಿತ್ಯದ ಅಧ್ಯಯನ ರವಿಯವರು ಯಾವ ಪರಿಯಲ್ಲಿ ಮಾಡಿದ್ದರೆನ್ನುವುದು ಒಂದು ತರಹದ ಗಾಬರಿಯನ್ನೂ ಬೆರಗನ್ನೂ ಹುಟ್ಟಿಸುತ್ತದೆ. ಪ್ರಾಯಶಃ ಇದನ್ನು ಟಿಪಿಕಲ್ ರವಿ ಬೆಳಗೆರೆಯವರ ಸ್ಟೈಲ್ ಎಂದು ಕರೆಯಬಹುದು. ಒಂದು ಜನಪ್ರಿಯ ಕಾದಂಬರಿ ಸಾಹಿತ್ಯದ ಹಾಗೆ ಫಕ್ಕನೆ ಕಂಡರೂ ಒಳಗೊಳಗೇ ಸೂಕ್ಷ್ಮವಾದ ಮಾನವಶಾಸ್ತ್ರೀಯ, ಮನಃಶಾಸ್ತ್ರೀಯ ವಿನ್ಯಾಸಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನೂತನ ಮಾದರಿಯಾಗಿ ’ಸರ್ಪ ಸಂಬಂಧ’ ನಿಲ್ಲುತ್ತದೆ.

ಪಶುಪತಿ ಶ್ರೀನಿವಾಸ

ರವಿ ಬೆಳಗೆರೆಯವರ ’ಸರ್ಪ ಸಂಬಂಧ’ ಕಾದಂಬರಿಗೆ ಬರೆದ ’ಪ್ರವೇಶ’ದಿಂದ, ೨೦೦೦, ಧಾರಿಣಿ ಪ್ರಕಾಶನ (Picture courtesy - Internet)

Monday, August 1, 2011

ನಿಂತುಹೋಯಿತಾ ಮಳೆ?!ಈಗಷ್ಟೇ ಮಣ್ಣ ಹಸಿ ವಾಸನೆ ಹರಡತೊಡಗಿತ್ತು-
ಗಾಳಿ ತಂಪನೊರೆಯುತ್ತಿತ್ತು
ದೂರದಲ್ಲೆಲ್ಲೊ ಛಟೀಲನೆ ಸಿಡಿಲು ಬಿದ್ದಿತ್ತು!
ಅಂಗಳದ ಮಲ್ಲಿಗೆಯಂಟಿನ ಎಲೆಯ ಕೊನೆಯಲ್ಲಿ ಹನಿಗೂಡಿ ತೊನೆಯುತ್ತಿತ್ತು
ಮನ ಧನ್ಯವಾಗುತ್ತಿತ್ತು
ಏನೋ ನೆನಪಾಗುತ್ತಿತ್ತು
ಎಲ್ಲೋ ಮಗು ನಗುತ್ತಿತ್ತು, ಮುದಗೊಳ್ಳುತ್ತಿತ್ತು!

ಬೇಸಗೆಯ ಕಾವು ಕಳೆಯುತ್ತಿತ್ತು-
ಕಣ್ಣು ಹತ್ತಿತ್ತು, ಕನಸು ಮೂಡುತ್ತಿತ್ತು
ಸಾಗರದ ಒಡಲೊಳಗೆ ಚಿಪ್ಪು ಬಾಯಿ ತೆರೆಯುತ್ತಿತ್ತು,
ಹನಿ ಸೇರಿದ್ದರೆ ಮುತ್ತಾಗುತ್ತಿತ್ತು
ಪ್ರೇಯಸಿಯಿದ್ದಿದ್ದರೆ ಸಲ್ಲಾಪವಾಗುತ್ತಿತ್ತು,
ಪದ್ಯ ಕುಡಿಯೊಡೆಯುವುದಿತ್ತು,
ಅಂಗೈ ಚಾಚಿದ್ದರೆ ಒದ್ದೆಯಾಗುತ್ತಿತ್ತು,
ಪ್ರಕೃತಿಯ ಅಗಾಧ ಕೃಪೆಯ ನಡುವೆ ಪ್ರಾರ್ಥನೆಯಗುತ್ತಿತ್ತು.
ಮರೆತ ಮಾತು ಸುಳಿಯುತ್ತಿತ್ತು-
ಸಣ್ಣನೆ ಚಳಿಗೆ ಹೊದ್ದ ಚದ್ದರದೊಳಗೇ ಬೆಚ್ಚನೆಯ ಗೂಡಾಗುತ್ತಿತ್ತು.

ನಿಂತೇ ಹೋಯಿತಾ ಮಳೆ?
ಬೇಸಗೆಯುಗಿ ಹೇಗೆ ಹರಡುತ್ತೆ ನೋಡು! ನಿಂತ ಗಾಳಿಗೆ ಎಲೆಯೆಲೆಯು ನಿಶ್ಚಲ-
ಬೆನ್ನೆಲ್ಲ ಬೆವರು, ದುಸ್ವಪ್ನದ ನಡುವೆ ಎದ್ದವರ ಹಾಗೆ!
ಫ್ಯಾನು ಹಾಕಿ ಮಲಗಬೇಕು,
ಬೆವರು ನಿಂತರು ನಿಂತೀತು, ನಿದ್ರೆ ಬಂದೀತು,
ಕನಸು ಮತ್ತೆ ಬಂದರೂ ಬಂದೀತು.
ಥೇಟು ಬೇಸಗೆಯ ನಡುವೆ ಬಂದ ಮಳೆಯ ಹಾಗೇ!

ಚಿತ್ರಕೃಪೆ - ಅಂತರ್ಜಾಲ