Monday, August 1, 2011

ನಿಂತುಹೋಯಿತಾ ಮಳೆ?!



ಈಗಷ್ಟೇ ಮಣ್ಣ ಹಸಿ ವಾಸನೆ ಹರಡತೊಡಗಿತ್ತು-
ಗಾಳಿ ತಂಪನೊರೆಯುತ್ತಿತ್ತು
ದೂರದಲ್ಲೆಲ್ಲೊ ಛಟೀಲನೆ ಸಿಡಿಲು ಬಿದ್ದಿತ್ತು!
ಅಂಗಳದ ಮಲ್ಲಿಗೆಯಂಟಿನ ಎಲೆಯ ಕೊನೆಯಲ್ಲಿ ಹನಿಗೂಡಿ ತೊನೆಯುತ್ತಿತ್ತು
ಮನ ಧನ್ಯವಾಗುತ್ತಿತ್ತು
ಏನೋ ನೆನಪಾಗುತ್ತಿತ್ತು
ಎಲ್ಲೋ ಮಗು ನಗುತ್ತಿತ್ತು, ಮುದಗೊಳ್ಳುತ್ತಿತ್ತು!

ಬೇಸಗೆಯ ಕಾವು ಕಳೆಯುತ್ತಿತ್ತು-
ಕಣ್ಣು ಹತ್ತಿತ್ತು, ಕನಸು ಮೂಡುತ್ತಿತ್ತು
ಸಾಗರದ ಒಡಲೊಳಗೆ ಚಿಪ್ಪು ಬಾಯಿ ತೆರೆಯುತ್ತಿತ್ತು,
ಹನಿ ಸೇರಿದ್ದರೆ ಮುತ್ತಾಗುತ್ತಿತ್ತು
ಪ್ರೇಯಸಿಯಿದ್ದಿದ್ದರೆ ಸಲ್ಲಾಪವಾಗುತ್ತಿತ್ತು,
ಪದ್ಯ ಕುಡಿಯೊಡೆಯುವುದಿತ್ತು,
ಅಂಗೈ ಚಾಚಿದ್ದರೆ ಒದ್ದೆಯಾಗುತ್ತಿತ್ತು,
ಪ್ರಕೃತಿಯ ಅಗಾಧ ಕೃಪೆಯ ನಡುವೆ ಪ್ರಾರ್ಥನೆಯಗುತ್ತಿತ್ತು.
ಮರೆತ ಮಾತು ಸುಳಿಯುತ್ತಿತ್ತು-
ಸಣ್ಣನೆ ಚಳಿಗೆ ಹೊದ್ದ ಚದ್ದರದೊಳಗೇ ಬೆಚ್ಚನೆಯ ಗೂಡಾಗುತ್ತಿತ್ತು.

ನಿಂತೇ ಹೋಯಿತಾ ಮಳೆ?
ಬೇಸಗೆಯುಗಿ ಹೇಗೆ ಹರಡುತ್ತೆ ನೋಡು! ನಿಂತ ಗಾಳಿಗೆ ಎಲೆಯೆಲೆಯು ನಿಶ್ಚಲ-
ಬೆನ್ನೆಲ್ಲ ಬೆವರು, ದುಸ್ವಪ್ನದ ನಡುವೆ ಎದ್ದವರ ಹಾಗೆ!
ಫ್ಯಾನು ಹಾಕಿ ಮಲಗಬೇಕು,
ಬೆವರು ನಿಂತರು ನಿಂತೀತು, ನಿದ್ರೆ ಬಂದೀತು,
ಕನಸು ಮತ್ತೆ ಬಂದರೂ ಬಂದೀತು.
ಥೇಟು ಬೇಸಗೆಯ ನಡುವೆ ಬಂದ ಮಳೆಯ ಹಾಗೇ!

ಚಿತ್ರಕೃಪೆ - ಅಂತರ್ಜಾಲ

1 comment:

  1. ನಶ್ವರವಾದದ್ದೇ ಹೆಚ್ಚು ಆಕರ್ಷಕ ಗೆಳೆಯಾ! - Manjunath Bhat

    ReplyDelete