Friday, August 21, 2009

ವಿಶಾಖಪಟ್ನಂ ಜ್ಙಾಪಕಗಳು

ವಿಶಾಖಪಟ್ನಮ್ ಯಾವಾಗ ಹುಟ್ಟಿತೋ ನಾನರಿಯೆನಾದರೂ ವಿಶಾಖಪಟ್ನದಲ್ಲಿ 1910ನೇ ಸಂವತ್ಸರದಲ್ಲಿ ನಾನು ಜನ್ಮತಾಳಿದೆ. ಅಂದಿನಿಂದ ನಾನೂ ವಿಶಾಖಪಟ್ನವೂ ಜೊತೆಯಾಗೆ ಬೆಳೆಯುತ್ತ ಬಂದಿದ್ದೇವೆ. ಮೊನ್ನೆ 'ಜಲ ಉಷ'() (ಎಂತ ವಿಕಾರವಾದ ಹೆಸರು!) ಸಮುದ್ರ ಪ್ರವೇಶ ಮಾಡಿದಾಗ ನಾನು ವಿಶಾಖಪಟ್ನದಲ್ಲಿ ಇರಲಿಲ್ಲವಾದರು ಆದಿನ ನಾನು ಕೂಡ ಆಧ್ಯಾತ್ಮಿಕವಾಗಿ ಒಂದು ಸಮುದ್ರ ಆರಂಭ ಮಾಡಿದೆ.

ಇದು ನಿಜ! ನನ್ನ ಕವಿತ್ವಕ್ಕೆ ಸಮುದ್ರವೇ ಆವೇಶ. ಸಮೀಪದಲ್ಲಿ ಸಮುದ್ರವಿಲ್ಲದ ಸ್ಥಳ ನನ್ನನ್ನು ಕೊಲ್ಲುತ್ತದೆ. ಡೆಲ್ಲಿಯಲ್ಲು, ಲಕ್ನೋನಲ್ಲು ಎಷ್ಟೋ ತಿಂಗಳುಗಳು ನಾನು ಜೀವಿಸಿದೆ. ಆದರೆ ಒಂದು ಗೀತೆಯೂ ಊದಲಾರದೆ ಹೋದೆ. ದಿನವೂ ಹೋಗದಿದ್ದರೂ ಹತ್ತಿರದಲ್ಲೆಲ್ಲೋ ಮಹಾಸಮುದ್ರವಿದೆಯೆಂದರೆ ಸಾಕು, ಖರ್ಚು ಮಾಡದಿದ್ದರೂ ಬ್ಯಾಂಕಿನಲ್ಲಿ ಹತ್ತು ಸಾವಿರ ಠೇವಣಿಯಿಟ್ಟಷ್ಟು ಧೈರ್ಯ!

ಮಿತ್ರ ಪಾಲೂರಿ ಸೀತಾಪತಿರಾವು() ಹೆಂಡತಿಗೆ ವಿಷವಿಟ್ಟು ಸಾಯಿಸಿದ್ದಕ್ಕೆ ಸೆಂಟ್ರಲ್ ಜೈಲಿನಲ್ಲಿ ಉರಿಗೆ ಹಾಕಿದರು. ಕೊನೆಯದಾಗಿ ಒಂದು ಸೀಜರ್ ಸಿಗರೇಟು ಕೇಳಿ ತರಿಸಿಕೊಂಡು ಸೇದಿ 'ಇನ್ನು ನಿಮ್ಮ ಕೆಲಸ ಮಾಡಿಕೊಳ್ಳಿ'ರೆಂದನಂತೆ ಆತ. ಎಷ್ಟೋ ನೂರು ಗ್ರಂಥಗಳನ್ನು ಓದಿದರೂ ಆಗದ ಅನುಭವವನ್ನ ಈ ಸಂನಿವೀಸ ಕೇಳಿದ ಕ್ಷಣದಲ್ಲಿ ಸಂಪಾದಿಸಿದೆ.

ನನ್ನ ವಿಶಾಖ ಸಂಸ್ಕೃತಿಯ ಪ್ರಧಾನರಸ ಬೀಭತ್ಸವೇ ಅನ್ನುವುದನ್ನು ಒಪ್ಪುತ್ತೇನೆ. ಆದರೆ ಅಭೌಮವಾದ ಮಹದಾನಂದ ಅನುಭವಿಸಿದ ಕ್ಷಣಗಳು ಕೂಡಾ ಅನೇಕ ಇವೆ. ರಾಳ್ಳತೋಟದಲ್ಲಿ ಕೆಲವು ಚಳಿಗಾಲದ ಪ್ರಾತಃಕಾಲಗಳು ಕುಸುಮಿಸುತ್ತಿರುವ ಗುಲಾಬಿ ಸಸಿಗಳ ನಡುವೆ ಕಳೆದುಹೋದವು. ಯಾರಾಡಕೊಂಡದ ಮೇಲೆ ಒಂಟಿಯಾಗಿ ನಿಂತು ಒಂದೊಂದು ದಿನ ಒಂದೊಂದು ಥರ ವಿಶಾಖಪಟ್ನವನ್ನು ನೋಡಿದೆ.

ಯಾವತ್ತಿಗಾದರೂ ನಾನೊಂದು ಹದಿನೈದು ಅಶ್ವಾಸಗಳ ಮಹಾಕಾವ್ಯವನ್ನು ಬರೆಯುತ್ತೇನೆ.

ಅದರ ಹೆಸರು 'ವಿಶಾಖಪಟ್ನಮ್'.

ನವೋದಯ ಪತ್ರಿಕೆ : 2-5-1948

ಟಿಪ್ಪಣಿ:
(೧) ವಿಶಾಖಪಟ್ನದಲ್ಲಿ ಭಾರತ ನೌಕಾನಿರ್ಮಾಣ ಕೇಂದ್ರ ನಿರ್ಮಿಸಿದ ಮೊದಲ ಹಡಗು ಜಲ ಉಷ 14-3-1948ರಂದು ಜಲಪ್ರವೇಶ ಮಾಡಿತು.
(೨) ಪಾಲೂರಿ ಸೀತಾಪತಿರಾವು ತಹಸೀಲ್ದಾರರ ಮಗ. ಮೆಡಿಕಲ್ ವಿದ್ಯಾರ್ಥಿ ಎಲ್.ಎಂ.ಪಿ. ಮೂರನೇ ವರ್ಷ ಓದುತ್ತಿದ್ದ. ಅನ್ನದಲ್ಲಿ ಪೊಟಾಸಿಯಂ ಸಯನೈಡ್ ಕಲೆಸಿ ಹೆಂಡತಿಯನ್ನು ಕೊಂದುಬಿಟ್ಟ.1928ರಲ್ಲಿ ಉರಿಶಿಕ್ಷೆ ವಿಧಿಸಿ, 1931ರಲ್ಲಿ ಉರಿಗೆ ಹಾಕಿದರು.

(ಶ್ರೀ ಶ್ರೀ ಯವರ ಆತ್ಮಚರಿತ್ರಾತ್ಮಕ ಕಾದಂಬರಿ 'ಅನಂತಂ'ನಿಂದ.)

1 comment: