Tuesday, August 11, 2009

ಗೊತ್ತು ಗುರಿಯಿರದ ದಾರಿಯಲ್ಲಿ...

'ಎಲ್ಲರು ಯಾಕೆ ಬರೆಯುತ್ತಾರೆ?' ಅನ್ನುವ ಪ್ರಶ್ನೆಗೆ ಅವರವರದೆ ಉತ್ತರ ಇದ್ದಿರಬೇಕು/ಬಹುದು. ನನಗು ಕೂಡ ಯಾಕೆ ಬರೆಯಬೇಕು ಅನ್ನುವ ಪ್ರಶ್ನೆ ಕಾಡಿಲ್ಲವಾದ್ದರಿಂದ - ಉತ್ತರ ಹುಡುಕುವ ಗೋಜಿನಿಂದ 'ಮುಕ್ತ ಮುಕ್ತ'. ಬರವಣಿಗೆಯಿಂದ ನೆಮ್ಮದಿ ಸಿಗುತ್ತ? ಅಥವ ಇನ್ನೊಬ್ಬರು ಓದಿ 'ಹುಳ' ಬಿಟ್ಟುಕೊಂದರೆ ಸಿಗುವ ಅನಿರ್ವಚನೀಯವಾದ ಸ್ಯಾಡಿಸ್ಟ್ ಫೀಲಿಂಗ್? ಅಂತು ಬರೆಯೋದು ರೂಡಿಸಿಕೊಂಡ ಮೇಲೆ ಬರೆಯದಿರೋದು ಕಷ್ಟವೆನ್ನುವುದು ಮಾತ್ರ ಸತ್ಯ. ಅದಕ್ಕೆ ಸಾಕ್ಷಿಯಾಗಿ ಸಾವಿರಾರು ಕವಿಗಳು, ಕುಕವಿಗಳು, ನನ್ನಂತಹ ಪಾರ್ಟ್ ಟೈಮ್ ಲೇಖಕರು ಅಸಂಖ್ಯ ಇರಬಹುದು.

ಶಾಲಾ ದಿನಗಳಲ್ಲಿ ಕೆಲ ಪ್ರಬಂದಗಳನ್ನು ಬರೆದದ್ದು ಬಿಟ್ಟರೆ ನಾನು ಪ್ರಯತ್ನಪೂರ್ವಕ ಬರವಣಿಗೆಯಲ್ಲಿ ತೊಡಗಿಕೊಂಡದ್ದು ಕಡಿಮೆಯೆ. ಕಾಲೇಜು ದಿನಗಳಲ್ಲಿ ಬರೆದ ಕೆಲವು ಬಿಡಿ ಲೇಖನಗಳನ್ನು ನನ್ನ ಕೆಲ ಪ್ರಾಧ್ಯಾಪಕರು ಗಮನಿಸಿ 'ಬರೆಯಬಲ್ಲೆ'ನೆಂಬ ನಂಬಿಕೆ ಮೂಡಿಸಿದ್ದರೊಂದಿಗೆ ಸುರುವಾಯಿತು ಹಂಬಲ. ಈ ನಡುವೆ ಪತ್ರಿಕೋದ್ಯಮದ ಹುಚ್ಚು ಕೈ ಹಿಡಿದು ನಡೆಸಿತು. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಲೇಖನಗಳು, ಅದಕ್ಕೆ ಬಂದ ಪ್ರತಿಕ್ರಿಯೆಗಳು 'ನಾನೂ ಗಂಭೀರವಾಗಿ ಬರೆಯಬಲ್ಲೆನೆಂಬ ಭರವಸೆಯನ್ನು ಮೂಡಿಸುವುದರೊಂದಿಗೆ - ಜೀವನ, ಬರವಣಿಗೆ ಬೇರೆ ಬೇರೆ ಅಲ್ಲವೇನೋ ಅನ್ನುವಷ್ಟು ಆತುಕೊಂಡವು. ದೊಡ್ಡವರ ಒಡನಾಟ, ಪಾತ್ರಿಕೇಯನೆಂಬ ಸಾಮಾಜಿಕ ಹೆಗ್ಗಳಿಕೆ ಎಲ್ಲವು ಒಂದಷ್ಟು ಮುದ ತಂದಿದ್ದು ಹೌದು. ಕ್ರಮೇಣ ಬರೆದು ಬದುಕಲು ಬಿಡದ ವಾಸ್ತವ ನನ್ನನ್ನು ಬೇರೊಂದೆಡೆಗೆ ಎಳೆಯ ಹತ್ತಿತ್ತು. ಅದಷ್ಟೆ ಅಲ್ಲದೆ - ಒಂದು ಹಂತದಲ್ಲಿ - ನಾನು ಬರೆಯುತ್ತಿರೊದೆಲ್ಲ ಸರಿ ಇಲ್ಲ - ಬರೆಯೊಕ್ಕೆ ಬೇಕಾಗಿರೊ ಅನುಭವ ನನಗಿಲ್ಲ, ನಾನು ಬರಿತ ಇರೊದೆಲ್ಲ 'ತೀರಾ ಕಚ್ಚ' ಅನ್ನಿಸಿದಾಗ, ೩೫ ಅಗೊವರೆಗೆ ಬರೆಯೋದು ಬೇಡ ಅನ್ತ ನಿರ್ಧರಿಸಿ ಬರೆಯೊದನ್ನ ನಿಲ್ಲಿಸಿಬಿಟ್ಟೆ. ಒಂದು ದಶಕದ ಮುನಿಸು ಮುಗಿಸುವ ಮನಸು ಈಗ ಬಂದಿದೆ. ಬರವಣಿಗೆಯ ಸಖ್ಯಕ್ಕೆ ನಾನು ಕಾದಿದ್ದೇನೆ. ಬರೆಸುವ ಕೈಗಳು ಅನುಮತಿಸಿದರೆ ಬರೆಯುವ ಕೈಗಳದ್ದೇನು ಮಹಾ ಅಲ್ಲವ?

ಗೊತ್ತು ಗುರಿಯಿರದ ದಾರಿಯಲ್ಲಿ ಇನ್ನೊಂದು ಪ್ರಯಣಕ್ಕೆ ನಾನೆನೋ ರೆಡಿ.. ಬರೆಯೊ ಹದ ಇದೆಯ? ಬರೆಯಬಲ್ಲೆನ? ಅನ್ನೊ ಅನುಮಾನ ಇನ್ನು ಒಂದೆರಡು ದಿನ ಕಾಡೀತು... ನೋಡೋಣ... ಉತ್ತರಕ್ಕೆ ಬಹಳ ಕಾಯಬೇಕಾಗಿಲ್ಲ ಅನ್ನಿಸುತ್ತೆ.

1 comment:

  1. abhinandanegalu Srini matte barevuya hambala bandadakke mattu nivu bareyalu shuru madidakke...

    Olleyadaagali....
    leena

    ReplyDelete