Tuesday, September 22, 2009

ಕಾಣದಿದ್ದರೂ ಕಂಡಿತು ಎನ್ನಬೇಕಂತೆ! ಅದಕ್ಕೆ 'ಅರುಂಧತಿ'ಯೆನ್ನುತ್ತಾರೆ

ಆಕಾಶ ನೋಡಲು ನೂಕುನುಗ್ಗಲೇ? ಹೌದು. ಇದೊಂದು ಸಲ ಮಾತ್ರ! ಹೊಸ ದಾಂಪತ್ಯಕ್ಕೆ ಮುನ್ನಡಿಯನ್ನಿಟ್ಟ ಯುವಜೋಡಿಯ ಸುತ್ತ ಜನರೇ ಜನ. ಹಗಲು ಹೊತ್ತಿನಲ್ಲಿ ನಕ್ಷತ್ರ ತೋರಿಸುವ ಆತನ ಹುನ್ನಾರವೇನೋ ಗೊತ್ತಿಲ್ಲ. ಬಹುಶಃ ಸಾವಿರ ಸುಳ್ಳು ಹೇಳಿ ಸಾಧಿಸಿದ ಮದುವೆಯ ಕೊನೆಯ ಸುಳ್ಳು ಇದಿರಬಹುದೇನೋ! (ಆತ ಪುರೋಹಿತ - ಯಾವ ಪುರದ ಹಿತ ಬಯಸುವವನೋ?)

ಅರುಂಧತಿಯೆಂದರೆ ಅದೇನಂತಹ ಬೃಹತ್ ತಾರೆಯಲ್ಲ. ನಕ್ಷತ್ರ ಸಮುಚ್ಛಯವೋ, ನೀಹಾರಿಕೆಯೋ ಖಂಡಿತಾ ಅಲ್ಲ. ಹಗಲೇ ಏಕೆ, ರಾತ್ರಿಯ ಕಾರ್ಗತ್ತಲಲ್ಲಿ ಶುಭ್ರ ನಿರಭ್ರ ಆಗಸದಲ್ಲಿ 'ಇದೊಂದು ಸಲ ತೋರಿಸಿಬಿಡು ಮಹರಾಯ' ಎಂದು ಪಟ್ಟು ಹಿಡಿದುಕೂತರೆ ಸಾಕ್ಷಾತ್ ಹಗಲಲ್ಲಿ ನಕ್ಷತ್ರ ತೋರಿಸುವ ಪುರೋಹಿತನೂ ತಡಬಡಿಸಿಯಾನು!

ಆದರೆ ಮದುವೆಯ ಕೊನೆಗೆ ಅದೊಂದು ಅನಿವಾರ್ಯ.

ನಾನೂ ಕಾದಿದ್ದೇನೆ, ನಾನೂ-ನೀನೂ ಜೊತೆಗೂಡಿ, ಭುಜಕ್ಕೆ ಭುಜ ತಗುಲಿಸುವಷ್ಟು ಸಮೀಪ ನಿಂತು ಅವನು ಕೈ ತೋರಿದತ್ತ ಕನಸುಗಣ್ಣ ದಿಟ್ಟ ಚಿಮ್ಮುತ್ತ... ಆ ಅರುಂಧತಿಯನ್ನು ನೋಡಲು.

ಯಾರಿಗೆ ಗೊತ್ತು, ಅದು ಕಂಡರೂ ಕಂಡೀತು, ಮಗ್ಗುಲಲ್ಲಿ ನೀನಿರುವಾಗ! ಅದಿರಲಿ- ಪಕ್ಕದಲ್ಲಿ ಕೈಗೆಟುಕುವಷ್ಟು ಹತ್ತಿರದಲ್ಲಿ, ನೋರು ನಕ್ಷತ್ರ ಪ್ರಭೆಯನ್ನೂ ಮೀರಿಸುವ ಕಾಂತಿಯನ್ನು ಕಣ್ಣ ತುಂಬ ತುಂಬಿಕೊಂಡು ನಿಂತಿರುವಾಗ- 'ಅರುಂಧತಿಯಾ? ನಾನು ನೋಡಿದೆ' ಎಂದರೆ ಸುಳ್ಳಾಗುತ್ತದೆಯೇ?

ಬೇರೆಯವರ ವಿಚಾರ ಗೊತ್ತಿಲ್ಲ. ನಮ್ಮ ಪುರೋಹಿತನಂತೂ ನನ್ನ ಚಡ್ಡಿ ದೋಸ್ತು. ಆಗೀಗ ಅವನಿಗೊಂದು ಪತ್ರವನ್ನೂ ಬರೆಯುತ್ತಿರುತ್ತೇನೆ. ಮುಂದೊಂದು ದಿನ ನನ್ನ ನಿನ್ನ ಮದುವೆಯೆಂಬ ಮಹತ್ಕಾರ್ಯ ಮುಗಿದ ಮೇಲೆ ಅವನಿಗೆ ಸ್ಪಷ್ಟವಾಗಿ ಪತ್ರವೊಂದನ್ನು ಬರೆಯಲಿದ್ದೇನೆ.
"ಮಿತ್ರೋತ್ತಮ,

ನೀನು ಹಾಡು ಹಗಲಲ್ಲಿ ತೋರಿಸಿದ ಅರುಂಧತಿಯನ್ನು ಕಾಣಲಿಲ್ಲವೆಂದು ಸುಳ್ಳು ಹೇಳಿ ನರಕ ಬಯಸಲಾರೆ. ನನ್ನ ಪಕ್ಕದಲ್ಲೇ ನಿಂತಿದ್ದ ನನ್ನವಳ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದೆ. ಒಂದೇಕೆ? ಎರಡು ಅರುಂಧತಿಯ ಬೆಳಕು ಅಲ್ಲಿತ್ತು. ನಿನ್ನ ಉಪದ್ವ್ಯಾಪವೇನಿದ್ದರೂ ಆ ಆಚಾರ ನನಗಿಷ್ಟವಾಯಿತು. ನಮಗೆ ಗೊತ್ತಿಲ್ಲ ಆಗಸ ನೋಡಿ ತಾರೆಯೆಣಿಸುವ ಬದಲು ನಡೆಯುವ ನೆಲ ನೋಡಿದರೆ ಹಿತ ನೆನಪಿರಲಿ"

ಪ್ರೀತಿಯಿಂದ,
ವಾಸೀ.

1 comment:

  1. ಅದ್ಭುತ ಗುರುಗಳೇ, "ಎದೆ ತುಂಬ ಚಿತ್ತಾರವೇ ತುಂಬಿರಲು ಚಿತ್ರವಿನ್ನೇತಕ್ಕೆ?" ಯ ಕಲ್ಪನೆಗಿಂತಲೂ ಇದೇ ಹೆಚ್ಚು ಇಷ್ಟವಾಯಿತು. ಇದರಲ್ಲೇ ಜಾಸ್ತಿ ವಾಸ್ತವವಿದೆ!

    ReplyDelete