Tuesday, September 22, 2009

ಗಿಡದಲ್ಲಿದ್ದರೆ ನಳನಳಿಸೋ ಹಸಿರು - ಅರೆದರೆ ಕೆಂಪಾಗೋ ಮದರಂಗಿಯಂತೆ!

ಪ್ರೀತಿ ಯಾಕೆ ಹೀಗೆ? ಎಂದರೆ ಅದು ಹಾಗೇ ಎನ್ನುತ್ತಾನೆ ಇವನು. ಯಾಕೆ ಎನ್ನುವುದು ಅವನಿಗಾದರೂ ಅವಳಿಗಾದರೂ ಗೊತ್ತಿದ್ದರೆ ತಾನೆ ಪಾಪ!
* * *
ಅವನು-ಅವಳು ಪದಗಳನ್ನು ತಿಳಿದೇ ಬಳಸಿದ್ದೇನೆ. ಯಾಕೆಂದರೆ ಪ್ರೀತಿಯ ವಿಚಾರದಲ್ಲಿ ಇವೆರಡು ಪದಗಳು ಆಲ್ಜೀಬ್ರಾದ ವೇರಿಯಬಲ್-ಗಳಿದ್ದ ಹಾಗೆ. ಯಾರ ಹೆಸರನ್ನು ಬೇಕಾದರೂ ಅಲ್ಲಿ ತುಂಬಿಕೊಳ್ಳಬಹುದು.

ಒಂದರ್ಥದಲ್ಲಿ ಪ್ರೀತಿಯೆಂದರೆ ಸುಮ್ಮನೆ ತುಂಬಿಕೊಳ್ಳುತ್ತ ಹೋಗುವುದು.
* * *
ಪ್ರೀತಿಗೂ ಹೃದಯಕ್ಕೂ ಯಾಕಷ್ಟು ಹತ್ತಿರದ ಸಂಬಂಧ ಗೊತ್ತಾ? ಹೃದಯ ರಕ್ತದಲ್ಲಿನ ಮಲಿನ ಗುಣಗಳನ್ನು ತೆಗೆದು ಅಲ್ಲಿ ಆರೋಗ್ಯವನ್ನು ತುಂಬಿ ದೇಹದ ಪ್ರತಿ ಕಣಕ್ಕೂ ಕಳಿಸಿ ಚೈತನ್ಯವನ್ನು ಕೊಡುತ್ತದೆ. ಅದು ಕೇವಲ ಕೆಲ ಕ್ಷಣದ ಮಟ್ಟಿಗೆ ಕೆಲಸ ನಿಲ್ಲಿಸಿದರೂ ಜೀವನ ಮುಗಿದುಹೋದಂತೆಯೆ! ಅಂತೆಯೇ ಪ್ರೀತಿ ಸಹಾ - ಯಾವ ಕ್ಷಣಕ್ಕೆ ಪ್ರೀತಿಯನ್ನೆಲ್ಲ ಕಳೆದುಕೊಂಡುಬಿಡುತ್ತೇವೆಯೋ ಅಲ್ಲಿಗೆ ಜೀವನದ ಸಾರ್ಥಕ್ಯ ಮುಗಿದುಹೋದಂತೆಯೇ!
* * *
ಪ್ರೀತಿ ಗೆಲ್ಲುತ್ತದೆಯೇ ಎಂದರೆ ಬಹುಶಃ ಓಶೋ ಕೂಡ ಉತ್ತರಿಸಲಾರ. ಪ್ರೀತಿಯಲ್ಲಿ ಸೋಲುವುದೂ ಗೆಲುವೇ ಅಲ್ಲವಾ?
* * *
'ಅಲ್ಲ ಮಹರಾಯ - ನೀನು ಹೇಳಲಿಕ್ಕೆ ಹೊರಟಿರುವುದಾದರೂ ಏನನ್ನು? ಅದನ್ನಷ್ಟು ಹೇಳಿಬಿಡು!" ಆಕೆಯ ದನಿಯಲ್ಲಿ ಒಂದಿಷ್ಟು ಮುನಿಸು/ 'ಸಿಗುವುದೇ ಅಪರೂಪಕ್ಕೆ, ಸಿಕ್ಕಾಗ ಪ್ರೀತಿಯಿಂದ ನಾಲ್ಕು ಮಾತು ಆಡುವುದು ಬಿಟ್ಟು ಹೀಗೆಲ್ಲ ಲೆಕ್ಚರ್ ಕೊಡಬಹುದೇ? ಮುಖ ತೋರಿಸೋದು ವಾರಕ್ಕೊಂದು ಸಲ, ಸರಿಯಾಗಿ ಫೋನು ಮಾಡಲ್ಲ. ನಾನೇನಾಗಿದೀನಿ - ಬದುಕಿದ್ದೀನಾ ಇದ್ದೀನಾ ಅನ್ನುವುದರಲ್ಲಿ ನಿನಗೆ ಆಸಕ್ತಿಯೇ ಇಲ್ಲ' ಅವಳ ಮುಖ ಕ್ರೋಧದಿಂದ ಕೆಂಪಾಗತೊಡಗಿತು.

ಹುಡುಗ ' ಹುಡುಗೀ ಕೇಳಿಲ್ಲಿ..' ಅಂದ. ಕೈ ಹಿಡಿದ. ಅವಳು ಕೊಸರಿಕೊಂಡಳು. ಅವನು ಬಿಡಲಿಲ್ಲ... ಅವಳಿಗೂ ಅದೇ ಬೇಕಿತ್ತೇನೋ... ಅವಳು ದೂರ ಸರಿಯಲೂ ಇಲ್ಲ.

ಅದಕ್ಕೇ ಹೇಳಿದ್ದು - ಪ್ರೀತಿಯೆಂದರೆ 'ಗಿಡದಲ್ಲಿದ್ದರೆ ನಳನಳಿಸೋ ಹಸಿರು - ಅರೆದರೆ ಕೆಂಪಾಗೋ ಮದರಂಗಿ'ಯಂತೆ ಅಂತ.

ಪ್ರೀತಿಯಿಂದ,
ವಾಸೀ.

No comments:

Post a Comment