Monday, September 21, 2009

ಕಳೆದ ಪ್ರೀತಿ ಒಡೆದ ಕೊಳಲು


ಒಡಲ ಉಸಿರೆ ಕೊಳಲ ತುಂಬಿ ರಾಗಕೊಂದು ರಾಗಿಣಿ
ಬೆಸೆದ ರಾಗ ಎದೆಯ ತುಂಬ ಜೇನು ಜೇನು ಇಂಪನ
ಹೊಸತು ಬಣ್ಣ ಹೊಸತು ಕಣ್ಣ ತೆರೆದು ನಗುವ ಸಿಂಚನ.

ಸ್ವರದ ಜೊತೆಗೆ ನಡೆವ ಪರಿಗೆ ಹೆಜ್ಜೆ ಗೆಜ್ಜೆ ಝಣ ಝಣ
ಒಡೆದ ಮುರಲಿ ನಿಂತ ನಾದ ಮನದ ಮುಗಿಲು ಬಣಬಣ

ಸ್ಥಾಯಿ ಏರಿ ತಾರಕ ಭಾವವದಕೆ ಪೂರಕ
ಪ್ರೀತಿ ಮಾತ ಕೇಳು ಮನವೆ ಸದ್ದಿಲ್ಲದೆ ಸುಮ್ಮನೆ
ಮೂಡಬಹುದು ಕಾವ್ಯವೊಂದು ಕವನ ಮುಗಿವ ಮೊದಲಿಗೇ!

ತಾಡಿಸಿದ್ದು ಕಾಡಿಸಿದ್ದು ಹೋಗುವುದೆ ವ್ಯರ್ಥಕೆ?
ಮಡಿಲ ಬಿಸಿಗೆ ಬಂದ ಒಸಗೆ ಎಲ್ಲ ಬರಿಯ ಸ್ವಾರ್ಥಕೆ?
ಇರಲಿ ಇರಲಿ ಹೀಗೆ ಎಂದೂ ಅನ್ನಿಸಿದುದು ಈ ಕ್ಷಣ
ಇರದು ಇರದು ಎಂಬ ಭೀತಿ ಎಲ್ಲೆಡೆಯೂ ಮರುಕ್ಷಣ

ನಮ್ಮ ಬಗೆಯ ಅರಿತು ಕಾಲ ನಕ್ಕುದೇಕೆ ತಿಳಿಯಿತೆ?
ನೆಲಕೆ ಬಿದ್ದ ಮುರಳಿ ಒಡೆದು ಕಳೆಯಿತಲ್ಲ ಹೂನಗೆ!
ಒಲುಮೆಯಾಸಗೆ ಹರಿದ ಪರಿಗೆ ಹ್ರಿದಯವೆಲ್ಲ ರೋಧನ
ಕಳೆದು ಹೋದ ಕ್ಷಣದ ನೆನಪು ಮಾತ್ರ ಚಿರಂತನ!


ಎರಡೂ ಹೇಗೆ ಒಂದೆಡೆ! ಬೇರೆ ಬೇರೆ ಅಲ್ಲವೇ?!

No comments:

Post a Comment