Monday, September 21, 2009

ಮಕ್ಕಳಿಗೆ ದಕ್ಕದ ಮುದ್ದಣ-ಮನೋರಮೆ!

"'ಜಾನಕಿಯವರ ಓದುವ ಬರೆಯುವ ಸುಖ ಮತ್ತು ಮಾತಾಡುವ ಚಟ" ನಡುವೆ ಓದುತ್ತ ಹೋದಂತೆ ಬೇರೆ ಬೇರೆ ವಿಚಾರಗಳು ಸುಳಿದವು. ಒಂದು ಕಡೆ ಆಧುನಿಕ ತಂತ್ರಜ್ಞಾನಗಳಿಂದ ಬರವಣಿಗೆ ಹಾಗೂ ಓದುವಿಕೆ ದೂರವಾಗುತ್ತಿರುವ ಕೊರಗೂ, ಇನ್ನೊಂದೆಡೆ ಪರದೇಶೀ ಭಾಷೆ ನಮ್ಮನ್ನು ಇನ್ನೂ ಆಳುತ್ತಿರುವ ನೋವು ಎರಡೂ ಹೃದಯವನ್ನು ತಟ್ಟಿದವು. ನಿಜ, ಇವೆರಡೂ ನಮ್ಮ ನಡುವೆ ಒಂದು ಕಂದಕವನ್ನು ಸೃಜಿಸಿದೆ. ಓದು ಹಾಗೂ ಬರಹಕ್ಕಿಂಥ ಬಿನ್ನಾಣವೇ ಮೇಲುಗೈ ಸಾಧಿಸಿದೆ.

ಕನ್ನಡ ಕಾಲ ಕಸ ಎನ್ನುವಂಥ ಇಂಗ್ಲಿಷ್ ವ್ಯಾಮೋಹಿಗಳು ಹುಟ್ಟಿಕೊಂಡಿದ್ದಾರೆ. ಇದು ರಾಜಧಾನಿಯ ಕತೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶವನ್ನೂ ಆವರಿಸಿಕೊಂಡಿರುವುದು ಕಳವಳದ ಸಂಗತಿ. ನಮ್ಮ ಮಕ್ಕಳನ್ನು ಇಂಗ್ಲಿಷ್ ತಲುಪಿದಷ್ಟು ಸುಲಭವಾಗಿ ಕನ್ನಡ ತಲುಪುತ್ತಿಲ್ಲ . ಇದಕ್ಕೆ ಶೇ ೯೦ ಭಾಗ ನಾವೇ ಕಾರಣರು.

ಲಕ್ಷಣವಾಗಿ ಮನೆಯಲ್ಲಿ ಆರಂಭಿಸಿ ಕಲಿಸಬೇಕಾದ ಕನ್ನಡವನ್ನ ಮೂಲೆಗೊಗೆದು 24 ಅಕ್ಷರದ ಪರದೇಶಿಯನ್ನು ಮಕ್ಕಳ ತಲೆಯ ಮೇಲೆ ಕೂರಿಸುವುದು ನ್ಯಾಯವೇ ಅಂತ ಒಮ್ಮೆಯಾದರೂ ನಮ್ಮನ್ನು ಪ್ರಶ್ನಿಸಿಕೊಂಡಿಲ್ಲದಿರುವುದು ಸೋಜಿಗವೇ ಸರಿ. ಬರೆಯುವುದೊಂದು, ಓದುವುದು ಇನ್ನೊಂದು ಇರುವ ಇಂಗ್ಲಿಷ್ಗಿಂತ ಕನ್ನಡ ಕಷ್ಟ. ಕಲಿತರೂ ಜೀವನಕ್ಕೆ ಪ್ರಯೋಜಕವಾಗದು. ಇಂಗ್ಲಿಷ್ ಬರದಿದ್ದರೆ ದೊಡ್ಡ ಗುಗ್ಗು ಅನ್ನುವ ಭ್ರಮೆಗಳನ್ನು ಮುಗ್ಧ ಮನಸ್ಸುಗಳೊಳಗೆ ತುಂಬಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಕಳಿಸುತ್ತಿರುವ ನಾವು ಆತ್ಮಭ್ರಷ್ಟ ಸ್ಥಿತಿಯನ್ನು ಹೇಗೆ ಒಪ್ಪಿಕೊಳ್ಳೋಣ ಹೇಳಿ? ಅಂತರ್ಯಕ್ಕೆ ಚುಚ್ಚುವ ಮಾತಾಯಿತು ಬಿಡಿ!

ಲೋಕಕ್ಕಂಜಿ ರೂಢಿಸಿಕೊಂಡ ಆಂಗ್ಲೋ ವ್ಯಕ್ತಿತ್ವವನ್ನು, ಅದನ್ನು ಕಲಿಯುವಾಗ ಅನುಭವಿಸಿದ ಕಷ್ಟ ಕೋಟಲೆಗಳನ್ನು, ತಪ್ಪು ತಪ್ಪಾಗಿ ಮಾತನಾಡಿ ಅಪಹಾಸ್ಯಕ್ಕೀಡಾಗಿ ಪಡೆದ ಕೀಳರಿಮೆಯನ್ನು ಮರೆಯೋಣವಾದರೂ ಹೇಗೆ ? ಇಷ್ಟಿದ್ದು ಕನ್ನಡ ಶಾಲೆಗೆ ನಮ್ಮ ಮಕ್ಕಳು ಕಾಲಿಟ್ಟರೆ ಬಂಧು ಮಿತ್ರರ ಕಣ್ಣಲ್ಲಿ ನಮ್ಮ ಇಮೇಜ್ ಏನಾಗಬೇಡ ? ನಮ್ಮ ಮಕ್ಕಳು ನಮ್ಮ ಸರೀಕರ ಮುಂದೆ ಕನ್ನಡದಲ್ಲಿ ಮಾತನಾಡಿದರೆ ಅವರೇನಂದುಕೊಂಡಾರು ? ಇವೆಲ್ಲ ಕಾಂಪ್ಲೆಕ್ಸ್ಗಳು ನಾವು ಬೆಳೆಸಿಕೊಂಡಂಥವು.ಯಾರು ಏನಂದುಕೊಂಡರೂ ಪರವಾಗಿಲ್ಲ, ಕನ್ನಡ ಕಲಿತ ಮಕ್ಕಳು ನಾಳೆ ಅಗತ್ಯ ಬಿದ್ದರೆ ನಾವು ಕಲಿತ ಹಾಗೇ ಇಂಗ್ಲಿಷ್ ಕಲಿತಾವು - ಎನ್ನುವ ಸರಳ ಸತ್ಯ ನಮಗೆ ಕಾಣುವುದೇ ಇಲ್ಲ.

ಬಟ್ಟೆ ಬಿಟ್ಟವರ ನಾಡಿನಲ್ಲಿ ಉಟ್ಟವನೆ ಮೂರ್ಖ. ಎಲ್ಲರೂ ಇಂಗ್ಲಿಷ್ಗೆ ಜೈ ಅಂದುಬಿಡೋಣ! ಸುಮ್ಮನೇ ಯಾಕೆ ತರಲೆ ತಾಪತ್ರಯ ಎನ್ನುವ ಮನಸ್ಥಿತಿಯ ನಮಗೆ ನಮ್ಮ ಮಕ್ಕಳು ನಾವು ಓದಿದ ಕನ್ನಡದ ಅಪೂರ್ವ ಪದ್ಯಗಳನ್ನು ಕಲಿಯುವುದಿಲ್ಲ. ಬದಲಿಗೆ ರೈಮ್ಸ್ ಕಲಿಯುತ್ತವೆಂಬ ನೋವು ಕಿಂಚಿತ್ತೂ ಇಲ್ಲ. ಹದಿ ಹರೆಯಲ್ಲಿ ಓದಿ ನಾವು ಆನಂದಿಸಿದ ಮುದ್ದಣ ಮನೋರಮೆಯರ ಸಲ್ಲಾಪ ನಮ್ಮ ಮಕ್ಕಳಿಗೆ ಸಿಕ್ಕುವುದಿಲ್ಲ. ನಾವು ಓದಿದ ಚಂದಮಾಮದ ಬೇತಾಳನ ಕಥೆಗಳನ್ನು ನಮ್ಮ ಮಕ್ಕಳು ಓದುವುದಿಲ್ಲ. ತೇಜಸ್ವಿಯ ಕರ್ವಾಲೋ, ಅನಂತ ಮೂರ್ತಿಯವರ ಸೂರ್ಯನ ಕುದುರೆ, ರಾಜಶೇಖರ ಭೂಸನೂರಮಠರ ಶತಮಾನದಾಚೆ, ಎಂ.ಎಸ್.ಕೆ. ಪ್ರಭುರವರ ಮುಖಾಬಿಲೆ ಇವ್ಯಾವನ್ನೂ ನಮ್ಮ ಮಕ್ಕಳು ಓದುವುದಿಲ್ಲ. ಆದರೆ ಯಾವ ಸೂಕ್ಷ್ಮವೂ ನಮ್ಮನ್ನು ಬಾಧಿಸದು! ಅಷ್ಟರ ಮಟ್ಟಿಗೆ ನಾವು ನಮ್ಮತನವನ್ನು ಕಳೆದುಕೊಂಡಿದ್ದೇವೆ.

ಮಕ್ಕಳ ಭವಿತವ್ಯಕ್ಕಾಗಿ ಎಲ್ಲ ಕೇವಲ ತ್ಯಾಗ ಮಾತ್ರ ಎಂದು ನಮ್ಮನ್ನು ನಾವೇ ಮೋಸಗೊಳಿಸಿಕೊಂಡಿದ್ದೇವೆ. ಕನ್ನಡ ಭಾಷೆಯ ಸೊಗಸನ್ನು ಸ್ವತಃ ನಾವು ಮರೆತು ಮಕ್ಕಳಿಗೆ ಅದರ ಸುಳಿವೂ ಸಿಗದ ಹಾಗೆ ಎಚ್ಚರಿಕೆ ವಹಿಸುತ್ತಿದ್ದೇವೆ. ಇದನ್ನು ಏನೆಂದು ಕರೆಯೋಣ ? ಕುರುಡನಾದರೂ ಲಾಂದ್ರ ಹಿಡಿದು ಇನ್ನೊಬ್ಬರಿಗೆ ಬೆಳಕು ಸಿಗಲೆಂದು ಹಾರೈಸುವ ಔದಾರ್ಯ ನಮ್ಮದೆಂದು ಬೀಗೋಣವೇ ? ಇದಂತೂ ವಿಷಾದವೇ ಸರಿ. ಎರಡನೇ ಮಾತಿಲ್ಲ.

ಇನ್ನು ಪತ್ರ ಸಂಸ್ಕೃತಿಯ ಮಾತು. ಫೋನ್, -ಮೇಯ್ಲ್, ಎಸ್ಎಂಎಸ್ಗಳಲ್ಲಿ ಪತ್ರಗಳು ತುಂಬಿಕೊಂಡುತ್ತಿದ್ದ ಸಾರ್ಥಕ ಭಾವ ಕೊಡಲು ಸಂಪೂರ್ಣವಾಗಿಲ್ಲದಿದ್ದರೂ, ತುಸು ಸಾಧ್ಯವಿದೆ. - ಮ್ಯಾಗಜೀನ್ಗಳು ಬಂದ ಕೂಡಲೇ ಮುದ್ರಿತ ಮಾಧ್ಯಮದವರು ಬಾಗಿಲೆಳೆದುಕೊಂಡು ಹೊರಟು ಹೋದರೆ ? ಓದುಗರು ಎಲ್ಲದಕ್ಕೂ ಇರುತ್ತಾರೆ. ಕಾಲಕ್ಕೆ ತಕ್ಕಂತೆ ತನ್ನ ಜ್ಞಾನವನ್ನು ಬದಲಿಸಿಕೊಂಡರೆ ತಪ್ಪೇನಿಲ್ಲ. ಆದರೆ ಕಳೆದುಹೋಗುತ್ತಿರುವ ಆಪ್ಯಾಯತೆಯನ್ನು ಕಂಡು ಕೊರಗುವುದು ತಪ್ಪಲ್ಲ , ತಪ್ಪುವುದೂ ಇಲ್ಲ.

ಪತ್ರಗಳು ಕಟ್ಟಿ ಕೊಡುವ ಭಾವ ತೀವ್ರತೆಯ ಪುನರಾವರ್ತನೆಯ ಸಾಧ್ಯತೆ - ಮೇಯ್ಲ್ಗೆ ಖಂಡಿತಾ ಇಲ್ಲ. ಅಂತೆಯೇ - ಮೇಯ್ಲ್ಗೆ ಇರುವ ವೇಗದ ಸಾಧ್ಯತೆ ಅಂಚೆ ಅಣ್ಣ ವಾರಕ್ಕೆ ತಂದುಕೊಡುವ ಪತ್ರಕ್ಕೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಬಳಸಿಕೊಳ್ಳುವುದು ನಮ್ಮ ಕೈಲೇ ಇದೆ. 'ಅಜ್ಜ ಅಜ್ಜಿ' ಎಂದು ಮಗುವಿನ ಕೈಲಿ ಬರೆಸಿ ಅಂಗೈ ಅಗಲದ ನಾಲ್ಕಾಣೆ ಕಾರ್ಡಿನಲ್ಲಿ ಕೊಟ್ಟ ಪುಳಕವನ್ನು ಫೋನಿನಲ್ಲೋ- - ಮೇಯ್ಲ್ನಲ್ಲೋ ಕೊಡಲು ಸಾಧ್ಯವೇ ? ಇಲ್ಲ ಎನ್ನುವುದು ಸತ್ಯಸ್ಯ ಸತ್ಯ. ಇದನ್ನೇ ಕಾಲಾಯ ತಸ್ಮೈ ನಮಃ ಎಂದಿದ್ದಾರೆಯೋ ? ನಿಮ್ಮಷ್ಟೇ ಸೋಜಿಗದಿಂದ ನಾನೂ ಉತ್ತರಕ್ಕಾಗಿ ತಡಕಾಡುತ್ತಿದ್ದೇನೆ.

ತಮ್ಮ ಲೇಖನದಿಂದ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಡುತ್ತಾ ಜಾನಕಿಯವರಿಗೆ ಥ್ಯಾಂಕ್ಸ್ ಹೇಳದಿದ್ದರೆ, ನಮಗೆ ನಾವೇ ಸಾರಿ ಹೇಳಿಕೊಳ್ಳಬೇಕಾದೀತು!

No comments:

Post a Comment