Tuesday, September 22, 2009

ಎದೆ ತುಂಬ ಚಿತ್ತಾರವೇ ತುಂಬಿರಲು ಚಿತ್ರವಿನ್ನೇತಕ್ಕೆ?

ನೀನು ಎದ್ದು ಹೋಗಿ ಸಾಕಷ್ಟು ಸಮಯವೇ ಆಯಿತಲ್ಲ. ಆದರೂ ಸದಾ ನಿನ್ನನ್ನು ಸುತ್ತಿ-ಬಳಸಿ ಸುಳಿವ ಸುಗಂಧ ನಾಸಿಕ ರಂಧ್ರದಿಂದಾಚೆಗೆ ಹೋಗಲಾರೆ... ಹೋಗಲಾರೆ... ಎನ್ನುತ್ತಿದೆ. ಈ ಕ್ಷಣವೂ ಇನ್ನೂ ನಿನ್ನ ಕೆನ್ನೆ ನನ್ನ ಕೆನ್ನೆಯನ್ನು ಸೋಕಿದಂತೆ ಭಾಸವಾಗುತ್ತಿದೆ... ತೋಳುಗಳಲ್ಲಿ ಬಿಸುಪಿನ್ನೂ ಹಾಗೇ ಇದೆ.

ಕಣ್ಣು ಮುಚ್ಚಿದರೆ ಅದೇ ಕೆಂಪುಗಲ, ಮಿಂಚುಗಣ್ಣು, ಮಾದಕ ಮುಗುಳ್ನಗೆ!
ನನ್ನನ್ನು ಈ ಥರ ಸಾಯಿಸಬೇಕೆಂದು ಅದೆಷ್ಟು ದಿನಗಳಿಂದ ಕಾದಿದ್ದೆ? ನಿಜ ಹೇಳು!
***
ಈ ಪುಳಕಗಳು, ಅರ್ಥಹೀನ ಕಳ್ಳನಗುಗಳು, ಕಚಗುಳಿಗಳು, ಯಾವತ್ತೂ ಜೊತೆಯಲ್ಲಿಯೆ ಇರುತ್ತವೆ. ಹರೆಯ ಪ್ರೇಮನೌಕೆಯಲ್ಲಿ ದಾಂಗುಡಿಯಿಟ್ಟ ಕ್ಷಣ ಶುರು... ರೋಮಾಂಚನವೇ ರೋಮಾಂಚನ.
ಎದೆ ತುಂಬ ಲಹರಿ, ಕಣ್ತುಂಬ ಕನಸು - ಮೈ ತುಂಬ ನವಿರೇ ನವಿರು. ಅರ್ಥವಾಗದ ಸಾಂತ್ವನ. ಕ್ಲೀಷೆಯೋ ಅನ್ನಿಸುವಷ್ಟು ಬೆರಗು. ಮೊಗೆದಷ್ಟೂ ಆರ್ದ್ರ ಹೃದಯ.

ನೀನಿರುವಷ್ಟೂ ಹೊತ್ತು ಇದೆಲ್ಲ. ನೀನಿಲ್ಲದ ಕ್ಷಣ ಅದೊಂದು ಭೂಕಂಪಕ್ಕೊಳಗಾದ ಲಾತೂರಿನ ನೆಲ. ಎದೆಯೆಲ್ಲ ಹೇಳಲಾಗದ ಭಾರ. ಕಣ್ಣುಗಳಲ್ಲಿ ತನ್ನಿಂತಾನೆ ತುಂಬಿಕೊಳ್ಳುವ ತೇವ. ನೀನಿಲ್ಲದ ಜಗತ್ತೇಕೆ ಎನ್ನುವ ವೈರಾಗ್ಯ.
ಹಿಂದೆಯೆ - ಇವಳಿಲ್ಲದಿದ್ದರೇನಂತೆ ಸಂಜೆಗಾದರೂ ಸಿಗುತ್ತಾಳಲ್ಲ ಎನ್ನುವ ಆಶಾಭಾವ.
ಇದ್ದರೊಂದು-ಇರದಿದ್ದರೊಂದು ನಿರಂತರ ಗೋಳು!
***

ವರ್ಷವುರುಳುವಷ್ಟರಲ್ಲಿ ಈ ಸನಿಹ.. ವಿರಹಗಳ ಆಯಾಮವೇ ಬದಲಾಗುತ್ತದೆ! ನೀನಿದ್ದ ಕ್ಷಣ ಸರಸೋಲ್ಲಾಸ. ನೀನಿರದ ಕ್ಷಣ ಹತಾಶೆ, ಕೋಪದ ಮೇಳವಿಕೆ.
ನನ್ನೊಂದು ಕ್ಷಣ ಬಿಟ್ಟಿರಬೇಡ ಪ್ಲೀಸ್!
***

ಮರುವರ್ಷಕ್ಕೆ ಪ್ರೀತಿಯ ಪರಿಯಲ್ಲೇನು ವ್ಯತ್ಯಾಸವಿರದಿದ್ದರೂ ಯಾಕೋ ಪಕ್ವ ಪ್ರೀತಿಗೆ ಮನ ಪಕ್ಕಾಗುತ್ತದೆ. ನೀನಿರದಿದ್ದರೂ ನಿನ್ನ ಆಶಯ, ಪ್ರೋತ್ಸಾಹಗಳು ಬೆನ್ನ ಹಿಂದೆಯೇ ಇದ್ದು ಜೀವಕ್ಕೆ ಚೈತನ್ಯ ತುಂಬಿದಂತೆ. ಮೊದಲೆಲ್ಲ ನಿನ್ನ ಫೋಟೋ ಹಿಡಿದು ಗಂಟೆಗಟ್ಟಲೆ ಕೂಡುತ್ತಿದ್ದವನಿಗೆ ಈಗ ಅದರ ಅಗತ್ಯವಿಲ್ಲ. ಎದೆ ತುಂಬಾ ನೀ ಬರೆದಿರುವ ಚಿತ್ತಾರಗಳಿರುವಾಗ ಚಿತ್ರವೊಂದಿನ್ಯಾತಕ್ಕೆ?
***

ನೀನು ಸಿಗದೆ ಬಲು ದಿನಗಳಾದವು. ಪಾಪ ಕೆಲಸ ಜಾಸ್ತಿಯಾಗಿರಬೇಕು. ಮೊದಲು ಕಣ್ಣರೆಪ್ಪೆ ಮುಚ್ಚಿದಾಗೆಲ್ಲ ಬರುತ್ತಿದ್ದ ಚಿತ್ರ ಈಗೀಗ ತುಸು ಲೇಟಾಗಿ ಬಂದು ನನ್ನನ್ನು ಕಸಿವಿಸಿಗೊಳಿಸುತ್ತಿದೆ. ಹೀಗೆಲ್ಲ ಮಾಡಬೇಡ. ಕೆಲಸವೇನಿದ್ದರೂ ಕಣ್ಣರೆಪ್ಪೆ ಮುಚ್ಚುವ ಕ್ಷಣ ತಕ್ಷಣ ಬಾ. ಕನಸುಗಳಲ್ಲಿ ಆಬ್ಸೆಂಟ್ ಆಗುವ ನಿನ್ನ ಚಾಳಿಯನ್ನು ಬಿಟ್ಟುಬಿಡು.

ವಿ.ಸೂ: ಲಿಪ್ ಸ್ಟಿಕ್ ಚೆನ್ನಾಗಿದೆ. ಸೆಂಟ್ ಬದಲಾಯಿಸು!

ನಿನ್ನವ,
ವಾಸೀ.

No comments:

Post a Comment