Tuesday, September 22, 2009
ಎದೆ ತುಂಬ ಚಿತ್ತಾರವೇ ತುಂಬಿರಲು ಚಿತ್ರವಿನ್ನೇತಕ್ಕೆ?
ಕಣ್ಣು ಮುಚ್ಚಿದರೆ ಅದೇ ಕೆಂಪುಗಲ, ಮಿಂಚುಗಣ್ಣು, ಮಾದಕ ಮುಗುಳ್ನಗೆ!
ನನ್ನನ್ನು ಈ ಥರ ಸಾಯಿಸಬೇಕೆಂದು ಅದೆಷ್ಟು ದಿನಗಳಿಂದ ಕಾದಿದ್ದೆ? ನಿಜ ಹೇಳು!
***
ಈ ಪುಳಕಗಳು, ಅರ್ಥಹೀನ ಕಳ್ಳನಗುಗಳು, ಕಚಗುಳಿಗಳು, ಯಾವತ್ತೂ ಜೊತೆಯಲ್ಲಿಯೆ ಇರುತ್ತವೆ. ಹರೆಯ ಪ್ರೇಮನೌಕೆಯಲ್ಲಿ ದಾಂಗುಡಿಯಿಟ್ಟ ಕ್ಷಣ ಶುರು... ರೋಮಾಂಚನವೇ ರೋಮಾಂಚನ.
ಎದೆ ತುಂಬ ಲಹರಿ, ಕಣ್ತುಂಬ ಕನಸು - ಮೈ ತುಂಬ ನವಿರೇ ನವಿರು. ಅರ್ಥವಾಗದ ಸಾಂತ್ವನ. ಕ್ಲೀಷೆಯೋ ಅನ್ನಿಸುವಷ್ಟು ಬೆರಗು. ಮೊಗೆದಷ್ಟೂ ಆರ್ದ್ರ ಹೃದಯ.
ನೀನಿರುವಷ್ಟೂ ಹೊತ್ತು ಇದೆಲ್ಲ. ನೀನಿಲ್ಲದ ಕ್ಷಣ ಅದೊಂದು ಭೂಕಂಪಕ್ಕೊಳಗಾದ ಲಾತೂರಿನ ನೆಲ. ಎದೆಯೆಲ್ಲ ಹೇಳಲಾಗದ ಭಾರ. ಕಣ್ಣುಗಳಲ್ಲಿ ತನ್ನಿಂತಾನೆ ತುಂಬಿಕೊಳ್ಳುವ ತೇವ. ನೀನಿಲ್ಲದ ಜಗತ್ತೇಕೆ ಎನ್ನುವ ವೈರಾಗ್ಯ.
ಹಿಂದೆಯೆ - ಇವಳಿಲ್ಲದಿದ್ದರೇನಂತೆ ಸಂಜೆಗಾದರೂ ಸಿಗುತ್ತಾಳಲ್ಲ ಎನ್ನುವ ಆಶಾಭಾವ.
ಇದ್ದರೊಂದು-ಇರದಿದ್ದರೊಂದು ನಿರಂತರ ಗೋಳು!
***
ವರ್ಷವುರುಳುವಷ್ಟರಲ್ಲಿ ಈ ಸನಿಹ.. ವಿರಹಗಳ ಆಯಾಮವೇ ಬದಲಾಗುತ್ತದೆ! ನೀನಿದ್ದ ಕ್ಷಣ ಸರಸೋಲ್ಲಾಸ. ನೀನಿರದ ಕ್ಷಣ ಹತಾಶೆ, ಕೋಪದ ಮೇಳವಿಕೆ.
ನನ್ನೊಂದು ಕ್ಷಣ ಬಿಟ್ಟಿರಬೇಡ ಪ್ಲೀಸ್!
***
ಮರುವರ್ಷಕ್ಕೆ ಪ್ರೀತಿಯ ಪರಿಯಲ್ಲೇನು ವ್ಯತ್ಯಾಸವಿರದಿದ್ದರೂ ಯಾಕೋ ಪಕ್ವ ಪ್ರೀತಿಗೆ ಮನ ಪಕ್ಕಾಗುತ್ತದೆ. ನೀನಿರದಿದ್ದರೂ ನಿನ್ನ ಆಶಯ, ಪ್ರೋತ್ಸಾಹಗಳು ಬೆನ್ನ ಹಿಂದೆಯೇ ಇದ್ದು ಜೀವಕ್ಕೆ ಚೈತನ್ಯ ತುಂಬಿದಂತೆ. ಮೊದಲೆಲ್ಲ ನಿನ್ನ ಫೋಟೋ ಹಿಡಿದು ಗಂಟೆಗಟ್ಟಲೆ ಕೂಡುತ್ತಿದ್ದವನಿಗೆ ಈಗ ಅದರ ಅಗತ್ಯವಿಲ್ಲ. ಎದೆ ತುಂಬಾ ನೀ ಬರೆದಿರುವ ಚಿತ್ತಾರಗಳಿರುವಾಗ ಚಿತ್ರವೊಂದಿನ್ಯಾತಕ್ಕೆ?
***
ನೀನು ಸಿಗದೆ ಬಲು ದಿನಗಳಾದವು. ಪಾಪ ಕೆಲಸ ಜಾಸ್ತಿಯಾಗಿರಬೇಕು. ಮೊದಲು ಕಣ್ಣರೆಪ್ಪೆ ಮುಚ್ಚಿದಾಗೆಲ್ಲ ಬರುತ್ತಿದ್ದ ಚಿತ್ರ ಈಗೀಗ ತುಸು ಲೇಟಾಗಿ ಬಂದು ನನ್ನನ್ನು ಕಸಿವಿಸಿಗೊಳಿಸುತ್ತಿದೆ. ಹೀಗೆಲ್ಲ ಮಾಡಬೇಡ. ಕೆಲಸವೇನಿದ್ದರೂ ಕಣ್ಣರೆಪ್ಪೆ ಮುಚ್ಚುವ ಕ್ಷಣ ತಕ್ಷಣ ಬಾ. ಕನಸುಗಳಲ್ಲಿ ಆಬ್ಸೆಂಟ್ ಆಗುವ ನಿನ್ನ ಚಾಳಿಯನ್ನು ಬಿಟ್ಟುಬಿಡು.
ವಿ.ಸೂ: ಲಿಪ್ ಸ್ಟಿಕ್ ಚೆನ್ನಾಗಿದೆ. ಸೆಂಟ್ ಬದಲಾಯಿಸು!
ನಿನ್ನವ,
ವಾಸೀ.
ಕಾಣದಿದ್ದರೂ ಕಂಡಿತು ಎನ್ನಬೇಕಂತೆ! ಅದಕ್ಕೆ 'ಅರುಂಧತಿ'ಯೆನ್ನುತ್ತಾರೆ
ಅರುಂಧತಿಯೆಂದರೆ ಅದೇನಂತಹ ಬೃಹತ್ ತಾರೆಯಲ್ಲ. ನಕ್ಷತ್ರ ಸಮುಚ್ಛಯವೋ, ನೀಹಾರಿಕೆಯೋ ಖಂಡಿತಾ ಅಲ್ಲ. ಹಗಲೇ ಏಕೆ, ರಾತ್ರಿಯ ಕಾರ್ಗತ್ತಲಲ್ಲಿ ಶುಭ್ರ ನಿರಭ್ರ ಆಗಸದಲ್ಲಿ 'ಇದೊಂದು ಸಲ ತೋರಿಸಿಬಿಡು ಮಹರಾಯ' ಎಂದು ಪಟ್ಟು ಹಿಡಿದುಕೂತರೆ ಸಾಕ್ಷಾತ್ ಹಗಲಲ್ಲಿ ನಕ್ಷತ್ರ ತೋರಿಸುವ ಪುರೋಹಿತನೂ ತಡಬಡಿಸಿಯಾನು!
ಆದರೆ ಮದುವೆಯ ಕೊನೆಗೆ ಅದೊಂದು ಅನಿವಾರ್ಯ.
ನಾನೂ ಕಾದಿದ್ದೇನೆ, ನಾನೂ-ನೀನೂ ಜೊತೆಗೂಡಿ, ಭುಜಕ್ಕೆ ಭುಜ ತಗುಲಿಸುವಷ್ಟು ಸಮೀಪ ನಿಂತು ಅವನು ಕೈ ತೋರಿದತ್ತ ಕನಸುಗಣ್ಣ ದಿಟ್ಟ ಚಿಮ್ಮುತ್ತ... ಆ ಅರುಂಧತಿಯನ್ನು ನೋಡಲು.
ಯಾರಿಗೆ ಗೊತ್ತು, ಅದು ಕಂಡರೂ ಕಂಡೀತು, ಮಗ್ಗುಲಲ್ಲಿ ನೀನಿರುವಾಗ! ಅದಿರಲಿ- ಪಕ್ಕದಲ್ಲಿ ಕೈಗೆಟುಕುವಷ್ಟು ಹತ್ತಿರದಲ್ಲಿ, ನೋರು ನಕ್ಷತ್ರ ಪ್ರಭೆಯನ್ನೂ ಮೀರಿಸುವ ಕಾಂತಿಯನ್ನು ಕಣ್ಣ ತುಂಬ ತುಂಬಿಕೊಂಡು ನಿಂತಿರುವಾಗ- 'ಅರುಂಧತಿಯಾ? ನಾನು ನೋಡಿದೆ' ಎಂದರೆ ಸುಳ್ಳಾಗುತ್ತದೆಯೇ?
ಬೇರೆಯವರ ವಿಚಾರ ಗೊತ್ತಿಲ್ಲ. ನಮ್ಮ ಪುರೋಹಿತನಂತೂ ನನ್ನ ಚಡ್ಡಿ ದೋಸ್ತು. ಆಗೀಗ ಅವನಿಗೊಂದು ಪತ್ರವನ್ನೂ ಬರೆಯುತ್ತಿರುತ್ತೇನೆ. ಮುಂದೊಂದು ದಿನ ನನ್ನ ನಿನ್ನ ಮದುವೆಯೆಂಬ ಮಹತ್ಕಾರ್ಯ ಮುಗಿದ ಮೇಲೆ ಅವನಿಗೆ ಸ್ಪಷ್ಟವಾಗಿ ಪತ್ರವೊಂದನ್ನು ಬರೆಯಲಿದ್ದೇನೆ.
"ಮಿತ್ರೋತ್ತಮ,
ನೀನು ಹಾಡು ಹಗಲಲ್ಲಿ ತೋರಿಸಿದ ಅರುಂಧತಿಯನ್ನು ಕಾಣಲಿಲ್ಲವೆಂದು ಸುಳ್ಳು ಹೇಳಿ ನರಕ ಬಯಸಲಾರೆ. ನನ್ನ ಪಕ್ಕದಲ್ಲೇ ನಿಂತಿದ್ದ ನನ್ನವಳ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದೆ. ಒಂದೇಕೆ? ಎರಡು ಅರುಂಧತಿಯ ಬೆಳಕು ಅಲ್ಲಿತ್ತು. ನಿನ್ನ ಉಪದ್ವ್ಯಾಪವೇನಿದ್ದರೂ ಆ ಆಚಾರ ನನಗಿಷ್ಟವಾಯಿತು. ನಮಗೆ ಗೊತ್ತಿಲ್ಲ ಆಗಸ ನೋಡಿ ತಾರೆಯೆಣಿಸುವ ಬದಲು ನಡೆಯುವ ನೆಲ ನೋಡಿದರೆ ಹಿತ ನೆನಪಿರಲಿ"
ಪ್ರೀತಿಯಿಂದ,
ವಾಸೀ.
ಗಿಡದಲ್ಲಿದ್ದರೆ ನಳನಳಿಸೋ ಹಸಿರು - ಅರೆದರೆ ಕೆಂಪಾಗೋ ಮದರಂಗಿಯಂತೆ!
ಅವನು-ಅವಳು ಪದಗಳನ್ನು ತಿಳಿದೇ ಬಳಸಿದ್ದೇನೆ. ಯಾಕೆಂದರೆ ಈ ಪ್ರೀತಿಯ ವಿಚಾರದಲ್ಲಿ ಇವೆರಡು ಪದಗಳು ಆಲ್ಜೀಬ್ರಾದ ವೇರಿಯಬಲ್-ಗಳಿದ್ದ ಹಾಗೆ. ಯಾರ ಹೆಸರನ್ನು ಬೇಕಾದರೂ ಅಲ್ಲಿ ತುಂಬಿಕೊಳ್ಳಬಹುದು.
ಒಂದರ್ಥದಲ್ಲಿ ಪ್ರೀತಿಯೆಂದರೆ ಸುಮ್ಮನೆ ತುಂಬಿಕೊಳ್ಳುತ್ತ ಹೋಗುವುದು.
* * *
ಪ್ರೀತಿಗೂ ಹೃದಯಕ್ಕೂ ಯಾಕಷ್ಟು ಹತ್ತಿರದ ಸಂಬಂಧ ಗೊತ್ತಾ? ಹೃದಯ ರಕ್ತದಲ್ಲಿನ ಮಲಿನ ಗುಣಗಳನ್ನು ತೆಗೆದು ಅಲ್ಲಿ ಆರೋಗ್ಯವನ್ನು ತುಂಬಿ ದೇಹದ ಪ್ರತಿ ಕಣಕ್ಕೂ ಕಳಿಸಿ ಚೈತನ್ಯವನ್ನು ಕೊಡುತ್ತದೆ. ಅದು ಕೇವಲ ಕೆಲ ಕ್ಷಣದ ಮಟ್ಟಿಗೆ ಕೆಲಸ ನಿಲ್ಲಿಸಿದರೂ ಜೀವನ ಮುಗಿದುಹೋದಂತೆಯೆ! ಅಂತೆಯೇ ಪ್ರೀತಿ ಸಹಾ - ಯಾವ ಕ್ಷಣಕ್ಕೆ ಪ್ರೀತಿಯನ್ನೆಲ್ಲ ಕಳೆದುಕೊಂಡುಬಿಡುತ್ತೇವೆಯೋ ಅಲ್ಲಿಗೆ ಈ ಜೀವನದ ಸಾರ್ಥಕ್ಯ ಮುಗಿದುಹೋದಂತೆಯೇ!
* * *
ಪ್ರೀತಿ ಗೆಲ್ಲುತ್ತದೆಯೇ ಎಂದರೆ ಬಹುಶಃ ಓಶೋ ಕೂಡ ಉತ್ತರಿಸಲಾರ. ಪ್ರೀತಿಯಲ್ಲಿ ಸೋಲುವುದೂ ಗೆಲುವೇ ಅಲ್ಲವಾ?
* * *
'ಅಲ್ಲ ಮಹರಾಯ - ನೀನು ಹೇಳಲಿಕ್ಕೆ ಹೊರಟಿರುವುದಾದರೂ ಏನನ್ನು? ಅದನ್ನಷ್ಟು ಹೇಳಿಬಿಡು!" ಆಕೆಯ ದನಿಯಲ್ಲಿ ಒಂದಿಷ್ಟು ಮುನಿಸು/ 'ಸಿಗುವುದೇ ಅಪರೂಪಕ್ಕೆ, ಸಿಕ್ಕಾಗ ಪ್ರೀತಿಯಿಂದ ನಾಲ್ಕು ಮಾತು ಆಡುವುದು ಬಿಟ್ಟು ಹೀಗೆಲ್ಲ ಲೆಕ್ಚರ್ ಕೊಡಬಹುದೇ? ಮುಖ ತೋರಿಸೋದು ವಾರಕ್ಕೊಂದು ಸಲ, ಸರಿಯಾಗಿ ಫೋನು ಮಾಡಲ್ಲ. ನಾನೇನಾಗಿದೀನಿ - ಬದುಕಿದ್ದೀನಾ ಇದ್ದೀನಾ ಅನ್ನುವುದರಲ್ಲಿ ನಿನಗೆ ಆಸಕ್ತಿಯೇ ಇಲ್ಲ' ಅವಳ ಮುಖ ಕ್ರೋಧದಿಂದ ಕೆಂಪಾಗತೊಡಗಿತು.
ಹುಡುಗ 'ಏ ಹುಡುಗೀ ಕೇಳಿಲ್ಲಿ..' ಅಂದ. ಕೈ ಹಿಡಿದ. ಅವಳು ಕೊಸರಿಕೊಂಡಳು. ಅವನು ಬಿಡಲಿಲ್ಲ... ಅವಳಿಗೂ ಅದೇ ಬೇಕಿತ್ತೇನೋ... ಅವಳು ದೂರ ಸರಿಯಲೂ ಇಲ್ಲ.
ಅದಕ್ಕೇ ಹೇಳಿದ್ದು - ಪ್ರೀತಿಯೆಂದರೆ 'ಗಿಡದಲ್ಲಿದ್ದರೆ ನಳನಳಿಸೋ ಹಸಿರು - ಅರೆದರೆ ಕೆಂಪಾಗೋ ಮದರಂಗಿ'ಯಂತೆ ಅಂತ.
ಪ್ರೀತಿಯಿಂದ,
ವಾಸೀ.
Monday, September 21, 2009
ಕಳೆದ ಪ್ರೀತಿ ಒಡೆದ ಕೊಳಲು
ಒಡಲ ಉಸಿರೆ ಕೊಳಲ ತುಂಬಿ ರಾಗಕೊಂದು ರಾಗಿಣಿ
ಬೆಸೆದ ರಾಗ ಎದೆಯ ತುಂಬ ಜೇನು ಜೇನು ಇಂಪನ
ಹೊಸತು ಬಣ್ಣ ಹೊಸತು ಕಣ್ಣ ತೆರೆದು ನಗುವ ಸಿಂಚನ.
ಸ್ವರದ ಜೊತೆಗೆ ನಡೆವ ಪರಿಗೆ ಹೆಜ್ಜೆ ಗೆಜ್ಜೆ ಝಣ ಝಣ
ಒಡೆದ ಮುರಲಿ ನಿಂತ ನಾದ ಮನದ ಮುಗಿಲು ಬಣಬಣ
ಸ್ಥಾಯಿ ಏರಿ ತಾರಕ ಭಾವವದಕೆ ಪೂರಕ
ಪ್ರೀತಿ ಮಾತ ಕೇಳು ಮನವೆ ಸದ್ದಿಲ್ಲದೆ ಸುಮ್ಮನೆ
ಮೂಡಬಹುದು ಕಾವ್ಯವೊಂದು ಕವನ ಮುಗಿವ ಮೊದಲಿಗೇ!
ತಾಡಿಸಿದ್ದು ಕಾಡಿಸಿದ್ದು ಹೋಗುವುದೆ ವ್ಯರ್ಥಕೆ?
ಮಡಿಲ ಬಿಸಿಗೆ ಬಂದ ಒಸಗೆ ಎಲ್ಲ ಬರಿಯ ಸ್ವಾರ್ಥಕೆ?
ಇರಲಿ ಇರಲಿ ಹೀಗೆ ಎಂದೂ ಅನ್ನಿಸಿದುದು ಈ ಕ್ಷಣ
ಇರದು ಇರದು ಎಂಬ ಭೀತಿ ಎಲ್ಲೆಡೆಯೂ ಮರುಕ್ಷಣ
ನಮ್ಮ ಬಗೆಯ ಅರಿತು ಕಾಲ ನಕ್ಕುದೇಕೆ ತಿಳಿಯಿತೆ?
ನೆಲಕೆ ಬಿದ್ದ ಮುರಳಿ ಒಡೆದು ಕಳೆಯಿತಲ್ಲ ಹೂನಗೆ!
ಒಲುಮೆಯಾಸಗೆ ಹರಿದ ಪರಿಗೆ ಹ್ರಿದಯವೆಲ್ಲ ರೋಧನ
ಕಳೆದು ಹೋದ ಕ್ಷಣದ ನೆನಪು ಮಾತ್ರ ಚಿರಂತನ!
ಎರಡೂ ಹೇಗೆ ಒಂದೆಡೆ! ಬೇರೆ ಬೇರೆ ಅಲ್ಲವೇ?!
ಮಕ್ಕಳಿಗೆ ದಕ್ಕದ ಮುದ್ದಣ-ಮನೋರಮೆ!
"'ಜಾನಕಿಯವರ ಓದುವ ಬರೆಯುವ ಸುಖ ಮತ್ತು ಮಾತಾಡುವ ಚಟ"ದ ನಡುವೆ ಓದುತ್ತ ಹೋದಂತೆ ಬೇರೆ ಬೇರೆ ವಿಚಾರಗಳು ಸುಳಿದವು. ಒಂದು ಕಡೆ ಆಧುನಿಕ ತಂತ್ರಜ್ಞಾನಗಳಿಂದ ಬರವಣಿಗೆ ಹಾಗೂ ಓದುವಿಕೆ ದೂರವಾಗುತ್ತಿರುವ ಕೊರಗೂ, ಇನ್ನೊಂದೆಡೆ ಪರದೇಶೀ ಭಾಷೆ ನಮ್ಮನ್ನು ಇನ್ನೂ ಆಳುತ್ತಿರುವ ನೋವು ಎರಡೂ ಹೃದಯವನ್ನು ತಟ್ಟಿದವು. ನಿಜ, ಇವೆರಡೂ ನಮ್ಮ ನಡುವೆ ಒಂದು ಕಂದಕವನ್ನು ಸೃಜಿಸಿದೆ. ಓದು ಹಾಗೂ ಬರಹಕ್ಕಿಂಥ ಬಿನ್ನಾಣವೇ ಮೇಲುಗೈ ಸಾಧಿಸಿದೆ.
ಕನ್ನಡ ಕಾಲ ಕಸ ಎನ್ನುವಂಥ ಇಂಗ್ಲಿಷ್ ವ್ಯಾಮೋಹಿಗಳು ಹುಟ್ಟಿಕೊಂಡಿದ್ದಾರೆ. ಇದು ರಾಜಧಾನಿಯ ಕತೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶವನ್ನೂ ಆವರಿಸಿಕೊಂಡಿರುವುದು ಕಳವಳದ ಸಂಗತಿ. ನಮ್ಮ ಮಕ್ಕಳನ್ನು ಇಂಗ್ಲಿಷ್ ತಲುಪಿದಷ್ಟು ಸುಲಭವಾಗಿ ಕನ್ನಡ ತಲುಪುತ್ತಿಲ್ಲ . ಇದಕ್ಕೆ ಶೇ ೯೦ ಭಾಗ ನಾವೇ ಕಾರಣರು.
ಲಕ್ಷಣವಾಗಿ ಮನೆಯಲ್ಲಿ ಆರಂಭಿಸಿ ಕಲಿಸಬೇಕಾದ ಕನ್ನಡವನ್ನ ಮೂಲೆಗೊಗೆದು 24 ಅಕ್ಷರದ ಪರದೇಶಿಯನ್ನು ಮಕ್ಕಳ ತಲೆಯ ಮೇಲೆ ಕೂರಿಸುವುದು ನ್ಯಾಯವೇ ಅಂತ ಒಮ್ಮೆಯಾದರೂ ನಮ್ಮನ್ನು ಪ್ರಶ್ನಿಸಿಕೊಂಡಿಲ್ಲದಿರುವುದು ಸೋಜಿಗವೇ ಸರಿ. ಬರೆಯುವುದೊಂದು, ಓದುವುದು ಇನ್ನೊಂದು ಇರುವ ಇಂಗ್ಲಿಷ್ಗಿಂತ ಕನ್ನಡ ಕಷ್ಟ. ಕಲಿತರೂ ಜೀವನಕ್ಕೆ ಪ್ರಯೋಜಕವಾಗದು. ಇಂಗ್ಲಿಷ್ ಬರದಿದ್ದರೆ ದೊಡ್ಡ ಗುಗ್ಗು ಅನ್ನುವ ಭ್ರಮೆಗಳನ್ನು ಮುಗ್ಧ ಮನಸ್ಸುಗಳೊಳಗೆ ತುಂಬಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಕಳಿಸುತ್ತಿರುವ ನಾವು ಆತ್ಮಭ್ರಷ್ಟ ಸ್ಥಿತಿಯನ್ನು ಹೇಗೆ ಒಪ್ಪಿಕೊಳ್ಳೋಣ ಹೇಳಿ? ಅಂತರ್ಯಕ್ಕೆ ಚುಚ್ಚುವ ಮಾತಾಯಿತು ಬಿಡಿ!
ಲೋಕಕ್ಕಂಜಿ ರೂಢಿಸಿಕೊಂಡ ಆಂಗ್ಲೋ ವ್ಯಕ್ತಿತ್ವವನ್ನು, ಅದನ್ನು ಕಲಿಯುವಾಗ ಅನುಭವಿಸಿದ ಕಷ್ಟ ಕೋಟಲೆಗಳನ್ನು, ತಪ್ಪು ತಪ್ಪಾಗಿ ಮಾತನಾಡಿ ಅಪಹಾಸ್ಯಕ್ಕೀಡಾಗಿ ಪಡೆದ ಕೀಳರಿಮೆಯನ್ನು ಮರೆಯೋಣವಾದರೂ ಹೇಗೆ ? ಇಷ್ಟಿದ್ದು ಕನ್ನಡ ಶಾಲೆಗೆ ನಮ್ಮ ಮಕ್ಕಳು ಕಾಲಿಟ್ಟರೆ ಬಂಧು ಮಿತ್ರರ ಕಣ್ಣಲ್ಲಿ ನಮ್ಮ ಇಮೇಜ್ ಏನಾಗಬೇಡ ? ನಮ್ಮ ಮಕ್ಕಳು ನಮ್ಮ ಸರೀಕರ ಮುಂದೆ ಕನ್ನಡದಲ್ಲಿ ಮಾತನಾಡಿದರೆ ಅವರೇನಂದುಕೊಂಡಾರು ? ಇವೆಲ್ಲ ಕಾಂಪ್ಲೆಕ್ಸ್ಗಳು ನಾವು ಬೆಳೆಸಿಕೊಂಡಂಥವು.ಯಾರು ಏನಂದುಕೊಂಡರೂ ಪರವಾಗಿಲ್ಲ, ಕನ್ನಡ ಕಲಿತ ಮಕ್ಕಳು ನಾಳೆ ಅಗತ್ಯ ಬಿದ್ದರೆ ನಾವು ಕಲಿತ ಹಾಗೇ ಇಂಗ್ಲಿಷ್ ಕಲಿತಾವು - ಎನ್ನುವ ಸರಳ ಸತ್ಯ ನಮಗೆ ಕಾಣುವುದೇ ಇಲ್ಲ.
ಬಟ್ಟೆ ಬಿಟ್ಟವರ ನಾಡಿನಲ್ಲಿ ಉಟ್ಟವನೆ ಮೂರ್ಖ. ಎಲ್ಲರೂ ಇಂಗ್ಲಿಷ್ಗೆ ಜೈ ಅಂದುಬಿಡೋಣ! ಸುಮ್ಮನೇ ಯಾಕೆ ತರಲೆ ತಾಪತ್ರಯ ಎನ್ನುವ ಮನಸ್ಥಿತಿಯ ನಮಗೆ ನಮ್ಮ ಮಕ್ಕಳು ನಾವು ಓದಿದ ಕನ್ನಡದ ಅಪೂರ್ವ ಪದ್ಯಗಳನ್ನು ಕಲಿಯುವುದಿಲ್ಲ. ಬದಲಿಗೆ ರೈಮ್ಸ್ ಕಲಿಯುತ್ತವೆಂಬ ನೋವು ಕಿಂಚಿತ್ತೂ ಇಲ್ಲ. ಹದಿ ಹರೆಯಲ್ಲಿ ಓದಿ ನಾವು ಆನಂದಿಸಿದ ಮುದ್ದಣ ಮನೋರಮೆಯರ ಸಲ್ಲಾಪ ನಮ್ಮ ಮಕ್ಕಳಿಗೆ ಸಿಕ್ಕುವುದಿಲ್ಲ. ನಾವು ಓದಿದ ಚಂದಮಾಮದ ಬೇತಾಳನ ಕಥೆಗಳನ್ನು ನಮ್ಮ ಮಕ್ಕಳು ಓದುವುದಿಲ್ಲ. ತೇಜಸ್ವಿಯ ಕರ್ವಾಲೋ, ಅನಂತ ಮೂರ್ತಿಯವರ ಸೂರ್ಯನ ಕುದುರೆ, ರಾಜಶೇಖರ ಭೂಸನೂರಮಠರ ಶತಮಾನದಾಚೆ, ಎಂ.ಎಸ್.ಕೆ. ಪ್ರಭುರವರ ಮುಖಾಬಿಲೆ ಇವ್ಯಾವನ್ನೂ ನಮ್ಮ ಮಕ್ಕಳು ಓದುವುದಿಲ್ಲ. ಆದರೆ ಈ ಯಾವ ಸೂಕ್ಷ್ಮವೂ ನಮ್ಮನ್ನು ಬಾಧಿಸದು! ಅಷ್ಟರ ಮಟ್ಟಿಗೆ ನಾವು ನಮ್ಮತನವನ್ನು ಕಳೆದುಕೊಂಡಿದ್ದೇವೆ.
ಮಕ್ಕಳ ಭವಿತವ್ಯಕ್ಕಾಗಿ ಈ ಎಲ್ಲ ಕೇವಲ ತ್ಯಾಗ ಮಾತ್ರ ಎಂದು ನಮ್ಮನ್ನು ನಾವೇ ಮೋಸಗೊಳಿಸಿಕೊಂಡಿದ್ದೇವೆ. ಕನ್ನಡ ಭಾಷೆಯ ಸೊಗಸನ್ನು ಸ್ವತಃ ನಾವು ಮರೆತು ಮಕ್ಕಳಿಗೆ ಅದರ ಸುಳಿವೂ ಸಿಗದ ಹಾಗೆ ಎಚ್ಚರಿಕೆ ವಹಿಸುತ್ತಿದ್ದೇವೆ. ಇದನ್ನು ಏನೆಂದು ಕರೆಯೋಣ ? ಕುರುಡನಾದರೂ ಲಾಂದ್ರ ಹಿಡಿದು ಇನ್ನೊಬ್ಬರಿಗೆ ಬೆಳಕು ಸಿಗಲೆಂದು ಹಾರೈಸುವ ಔದಾರ್ಯ ನಮ್ಮದೆಂದು ಬೀಗೋಣವೇ ? ಇದಂತೂ ವಿಷಾದವೇ ಸರಿ. ಎರಡನೇ ಮಾತಿಲ್ಲ.
ಇನ್ನು ಪತ್ರ ಸಂಸ್ಕೃತಿಯ ಮಾತು. ಫೋನ್, ಈ-ಮೇಯ್ಲ್, ಎಸ್ಎಂಎಸ್ಗಳಲ್ಲಿ ಪತ್ರಗಳು ತುಂಬಿಕೊಂಡುತ್ತಿದ್ದ ಸಾರ್ಥಕ ಭಾವ ಕೊಡಲು ಸಂಪೂರ್ಣವಾಗಿಲ್ಲದಿದ್ದರೂ, ತುಸು ಸಾಧ್ಯವಿದೆ. ಇ- ಮ್ಯಾಗಜೀನ್ಗಳು ಬಂದ ಕೂಡಲೇ ಮುದ್ರಿತ ಮಾಧ್ಯಮದವರು ಬಾಗಿಲೆಳೆದುಕೊಂಡು ಹೊರಟು ಹೋದರೆ ? ಓದುಗರು ಎಲ್ಲದಕ್ಕೂ ಇರುತ್ತಾರೆ. ಕಾಲಕ್ಕೆ ತಕ್ಕಂತೆ ತನ್ನ ಜ್ಞಾನವನ್ನು ಬದಲಿಸಿಕೊಂಡರೆ ತಪ್ಪೇನಿಲ್ಲ. ಆದರೆ ಕಳೆದುಹೋಗುತ್ತಿರುವ ಆಪ್ಯಾಯತೆಯನ್ನು ಕಂಡು ಕೊರಗುವುದು ತಪ್ಪಲ್ಲ , ತಪ್ಪುವುದೂ ಇಲ್ಲ.
ಪತ್ರಗಳು ಕಟ್ಟಿ ಕೊಡುವ ಭಾವ ತೀವ್ರತೆಯ ಪುನರಾವರ್ತನೆಯ ಸಾಧ್ಯತೆ ಇ- ಮೇಯ್ಲ್ಗೆ ಖಂಡಿತಾ ಇಲ್ಲ. ಅಂತೆಯೇ ಇ- ಮೇಯ್ಲ್ಗೆ ಇರುವ ವೇಗದ ಸಾಧ್ಯತೆ ಅಂಚೆ ಅಣ್ಣ ವಾರಕ್ಕೆ ತಂದುಕೊಡುವ ಪತ್ರಕ್ಕೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಬಳಸಿಕೊಳ್ಳುವುದು ನಮ್ಮ ಕೈಲೇ ಇದೆ. 'ಅಜ್ಜ ಅಜ್ಜಿ' ಎಂದು ಮಗುವಿನ ಕೈಲಿ ಬರೆಸಿ ಅಂಗೈ ಅಗಲದ ನಾಲ್ಕಾಣೆ ಕಾರ್ಡಿನಲ್ಲಿ ಕೊಟ್ಟ ಪುಳಕವನ್ನು ಫೋನಿನಲ್ಲೋ- ಈ - ಮೇಯ್ಲ್ನಲ್ಲೋ ಕೊಡಲು ಸಾಧ್ಯವೇ ? ಇಲ್ಲ ಎನ್ನುವುದು ಸತ್ಯಸ್ಯ ಸತ್ಯ. ಇದನ್ನೇ ಕಾಲಾಯ ತಸ್ಮೈ ನಮಃ ಎಂದಿದ್ದಾರೆಯೋ ? ನಿಮ್ಮಷ್ಟೇ ಸೋಜಿಗದಿಂದ ನಾನೂ ಉತ್ತರಕ್ಕಾಗಿ ತಡಕಾಡುತ್ತಿದ್ದೇನೆ.
ತಮ್ಮ ಲೇಖನದಿಂದ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಡುತ್ತಾ ಜಾನಕಿಯವರಿಗೆ ಥ್ಯಾಂಕ್ಸ್ ಹೇಳದಿದ್ದರೆ, ನಮಗೆ ನಾವೇ ಸಾರಿ ಹೇಳಿಕೊಳ್ಳಬೇಕಾದೀತು!
ನಿನ್ನ ಕಣ್ಣ ವಿಸ್ತಾರಕ್ಕೆ
ಎದೆಯ ತಂತಿಗಳ ಮೀಟಿ
ತುಟಿಗೆ ತುಟಿ ಹಚ್ಚಿ,
ಮನಸ ಬಿಚ್ಚಿ
ಕಿವಿಯಲ್ಲಿ ಪಿಸು ನುಡಿದು
ಮೈಯ ತುಂಬೆಲ್ಲ ರಂಗೋಲಿ ಚಿತ್ತಾರ ಬರೆದು
ಆಕಾಶಕ್ಕೆ ಮೈ ಚಾಚಿ
ನಕ್ಷತ್ರಕ್ಕೆ ಕೈ ಚಾಚಿ-
ಬಿಕ್ಕಿ, ನೇವರಿಸಿ, ಸಾವರಿಸಿ, ಎದೆಗೀರಿ
ಪ್ರೀತಿಯ ಲೆಕ್ಕಗಳ್
ಕಳೆದು, ಭಾಗಿಸಿ, ಕೂಡಿಸಿ-ಗುಣಿಸಿ
ತಬ್ಬಿಬ್ಬಾಗಿಸಿ
ಚಿಮ್ಮಿ ಗಿರಿಗಿಟ್ಟೆಯಾಡಿಸಿ
ಸುತ್ತಿ ಸುಳಿಯಾಗಿ,
ಅಲೆದು ಅಲೆಯಾಗಿ
ನಿಂತು ನೀ ನಕ್ಕಾಗ-
ಗೊತ್ತು ಗೆಳತಿ,
ನನ್ನ ಪ್ರೀತಿ ಆಪೋಶನ-
ಮನ ತಪೋವನ
Friday, August 21, 2009
ವಿಶಾಖಪಟ್ನಮ್ ಯಾವಾಗ ಹುಟ್ಟಿತೋ ನಾನರಿಯೆನಾದರೂ ವಿಶಾಖಪಟ್ನದಲ್ಲಿ 1910ನೇ ಸಂವತ್ಸರದಲ್ಲಿ ನಾನು ಜನ್ಮತಾಳಿದೆ. ಅಂದಿನಿಂದ ನಾನೂ ವಿಶಾಖಪಟ್ನವೂ ಜೊತೆಯಾಗೆ ಬೆಳೆಯುತ್ತ ಬಂದಿದ್ದೇವೆ. ಮೊನ್ನೆ 'ಜಲ ಉಷ'(೧) (ಎಂತ ವಿಕಾರವಾದ ಹೆಸರು!) ಸಮುದ್ರ ಪ್ರವೇಶ ಮಾಡಿದಾಗ ನಾನು ವಿಶಾಖಪಟ್ನದಲ್ಲಿ ಇರಲಿಲ್ಲವಾದರು ಆದಿನ ನಾನು ಕೂಡ ಆಧ್ಯಾತ್ಮಿಕವಾಗಿ ಒಂದು ಸಮುದ್ರ ಆರಂಭ ಮಾಡಿದೆ.
ಇದು ನಿಜ! ನನ್ನ ಕವಿತ್ವಕ್ಕೆ ಸಮುದ್ರವೇ ಆವೇಶ. ಸಮೀಪದಲ್ಲಿ ಸಮುದ್ರವಿಲ್ಲದ ಸ್ಥಳ ನನ್ನನ್ನು ಕೊಲ್ಲುತ್ತದೆ. ಡೆಲ್ಲಿಯಲ್ಲು, ಲಕ್ನೋನಲ್ಲು ಎಷ್ಟೋ ತಿಂಗಳುಗಳು ನಾನು ಜೀವಿಸಿದೆ. ಆದರೆ ಒಂದು ಗೀತೆಯೂ ಊದಲಾರದೆ ಹೋದೆ. ದಿನವೂ ಹೋಗದಿದ್ದರೂ ಹತ್ತಿರದಲ್ಲೆಲ್ಲೋ ಮಹಾಸಮುದ್ರವಿದೆಯೆಂದರೆ ಸಾಕು, ಖರ್ಚು ಮಾಡದಿದ್ದರೂ ಬ್ಯಾಂಕಿನಲ್ಲಿ ಹತ್ತು ಸಾವಿರ ಠೇವಣಿಯಿಟ್ಟಷ್ಟು ಧೈರ್ಯ!
ಮಿತ್ರ ಪಾಲೂರಿ ಸೀತಾಪತಿರಾವು(೨) ಹೆಂಡತಿಗೆ ವಿಷವಿಟ್ಟು ಸಾಯಿಸಿದ್ದಕ್ಕೆ ಸೆಂಟ್ರಲ್ ಜೈಲಿನಲ್ಲಿ ಉರಿಗೆ ಹಾಕಿದರು. ಕೊನೆಯದಾಗಿ ಒಂದು ಸೀಜರ್ ಸಿಗರೇಟು ಕೇಳಿ ತರಿಸಿಕೊಂಡು ಸೇದಿ 'ಇನ್ನು ನಿಮ್ಮ ಕೆಲಸ ಮಾಡಿಕೊಳ್ಳಿ'ರೆಂದನಂತೆ ಆತ. ಎಷ್ಟೋ ನೂರು ಗ್ರಂಥಗಳನ್ನು ಓದಿದರೂ ಆಗದ ಅನುಭವವನ್ನ ಈ ಸಂನಿವೀಸ ಕೇಳಿದ ಕ್ಷಣದಲ್ಲಿ ಸಂಪಾದಿಸಿದೆ.
ನನ್ನ ವಿಶಾಖ ಸಂಸ್ಕೃತಿಯ ಪ್ರಧಾನರಸ ಬೀಭತ್ಸವೇ ಅನ್ನುವುದನ್ನು ಒಪ್ಪುತ್ತೇನೆ. ಆದರೆ ಅಭೌಮವಾದ ಮಹದಾನಂದ ಅನುಭವಿಸಿದ ಕ್ಷಣಗಳು ಕೂಡಾ ಅನೇಕ ಇವೆ. ರಾಳ್ಳತೋಟದಲ್ಲಿ ಕೆಲವು ಚಳಿಗಾಲದ ಪ್ರಾತಃಕಾಲಗಳು ಕುಸುಮಿಸುತ್ತಿರುವ ಗುಲಾಬಿ ಸಸಿಗಳ ನಡುವೆ ಕಳೆದುಹೋದವು. ಯಾರಾಡಕೊಂಡದ ಮೇಲೆ ಒಂಟಿಯಾಗಿ ನಿಂತು ಒಂದೊಂದು ದಿನ ಒಂದೊಂದು ಥರ ವಿಶಾಖಪಟ್ನವನ್ನು ನೋಡಿದೆ.
ಯಾವತ್ತಿಗಾದರೂ ನಾನೊಂದು ಹದಿನೈದು ಅಶ್ವಾಸಗಳ ಮಹಾಕಾವ್ಯವನ್ನು ಬರೆಯುತ್ತೇನೆ.
ಅದರ ಹೆಸರು 'ವಿಶಾಖಪಟ್ನಮ್'.
ನವೋದಯ ಪತ್ರಿಕೆ : 2-5-1948
ಟಿಪ್ಪಣಿ:
(೧) ವಿಶಾಖಪಟ್ನದಲ್ಲಿ ಭಾರತ ನೌಕಾನಿರ್ಮಾಣ ಕೇಂದ್ರ ನಿರ್ಮಿಸಿದ ಮೊದಲ ಹಡಗು ಜಲ ಉಷ 14-3-1948ರಂದು ಜಲಪ್ರವೇಶ ಮಾಡಿತು.
(೨) ಪಾಲೂರಿ ಸೀತಾಪತಿರಾವು ತಹಸೀಲ್ದಾರರ ಮಗ. ಮೆಡಿಕಲ್ ವಿದ್ಯಾರ್ಥಿ ಎಲ್.ಎಂ.ಪಿ. ಮೂರನೇ ವರ್ಷ ಓದುತ್ತಿದ್ದ. ಅನ್ನದಲ್ಲಿ ಪೊಟಾಸಿಯಂ ಸಯನೈಡ್ ಕಲೆಸಿ ಹೆಂಡತಿಯನ್ನು ಕೊಂದುಬಿಟ್ಟ.1928ರಲ್ಲಿ ಉರಿಶಿಕ್ಷೆ ವಿಧಿಸಿ, 1931ರಲ್ಲಿ ಉರಿಗೆ ಹಾಕಿದರು.